ಮಂಡ್ಯ: ಜಿಲ್ಲೆಯಲ್ಲಿ ನಾಳೆ ಗ್ರಾಪಂ ಚುನಾವಣೆ ಮತ ಎಣಿಕೆ ಕಾರ್ಯ ಹಿನ್ನೆಲೆ ಜಿಲ್ಲೆಯ 7 ತಾಲೂಕು ಕೇಂದ್ರಗಳಲ್ಲಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ ಎಣಿಕೆ ಕೇಂದ್ರದ ಬಳಿ ಭಾರಿ ಬಂದೋಬಸ್ತ್ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತಮುತ್ತ, ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಹಳ್ಳಿಗಳಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ ಎಂದರು.
ಓದಿ: ಫಲಿತಾಂಶ ಏನೇ ಇರಲಿ, ಆದರೆ ನಾವೆಲ್ಲರೂ ಒಂದೇ: ಪೊಲೀಸರಿಂದ ಶಾಂತಿಯ ಸಂದೇಶ
ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಟರ್ ಪ್ಯಾಟ್ರೋಲಿಂಗ್ ಮೊಬೈಲ್ ನೇಮಕ ಮಾಡಲಾಗಿದ್ದು, 4 ಕೆಎಸ್ಆರ್ಪಿ, 14 ಡಿಆರ್, 5 ಜನ ಡಿವೈಎಸ್ಪಿ, 14 ಸಿಪಿಐ, 38 ಪಿಎಸ್ಐ, 57 ಎಎಸ್ಐ, 655 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದರ ಜತೆ 100 ಜನ ಹೋಂ ಗಾರ್ಡ್ ಹಾಗೂ ಪೊಲೀಸ್ ಟ್ರೈನೀಸ್ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರದೊಂದಿಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಮಂಡ್ಯ ಎಸ್ಪಿ ಕೆ.ಪರಶುರಾಮ ತಿಳಿಸಿದರು.