ಕೆಆರ್‌ಪೇಟೆ/ಮಂಡ್ಯ : ಕಾಂಗ್ರೆಸ್ ಪಕ್ಷ ಇನ್ನೂ ಟೇಕ್ ಆಫ್ ಆಗಿಲ್ಲ. ಬಿಜೆಪಿ ಎಲ್ಲಾ ಕಡೆ ಟೇಕ್ ಆಫ್ ಆಗಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರೇ, ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರೇ ನಿಮ್ಮ ಕಾಂಗ್ರೆಸ್ ಪಕ್ಷ ಇನ್ನೂ ಟೇಕಾಫ್ ಆಗಲಿಲ್ಲ.
ಆದರೆ, ನಮ್ಮ ಭಾರತೀಯ ಜನತಾ ಪಕ್ಷವು ಈಗಾಗಲೇ ಶಿರಾ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಟೇಕಾಫ್ ಆಗಿದೆ. ಬಸವಕಲ್ಯಾಣದಲ್ಲಿ ಟೇಕಾಫ್ ಆಗುತ್ತದೆ, ಮಸ್ಕಿಯಲ್ಲಿ ಟೇಕಾಫ್ ಆಗುತ್ತದೆ ಹಾಗೂ ಬೆಳಗಾವಿ ಲೋಕಸಭೆಯಲ್ಲೂ ಟೇಕಾಫ್ ಆಗುತ್ತದೆ. ಆದರೆ, ನೀವಿಬ್ಬರೂ ಕೂಡ ಮಲಗಿಯೇ ಇದ್ದೀರಿ ಎಂದು ಟೀಕಿಸಿದ್ದಾರೆ.
ಬಿಜೆಪಿ ಬೆಳವಣಿಗೆ ಹೊಂದಲು ಎಲ್ಲ ಕಡೆ ಪಕ್ಷ ಗೆಲ್ಲಬೇಕಿದೆ. ಈ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಶೇ.85ರಷ್ಟು ಬಿಜೆಪಿ ಕಾರ್ಯಕರ್ತರು ಗೆಲ್ಲಬೇಕು ಎಂಬ ನಿಟ್ಟಿನಲ್ಲಿ 30 ಜಿಲ್ಲೆಯಲ್ಲಿಯೂ ಸಹ ಒಬ್ಬೊಬ್ಬ ನಾಯಕರನ್ನು ಮಾಡಿ ಅವರ ನೇತೃತ್ವದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಪಕ್ಷ ಬಲವರ್ದನೆಗೆ ಮುಖ್ಯಮಂತ್ರಿಗಳು ಈ ಕಾರ್ಯಕ್ರವನ್ನು ಹಾಕಿಕೊಂಡಿದ್ದಾರೆ. ಅದರ ಸಂಪೂರ್ಣ ಯಶಸ್ವಿಗೆ ನಾವೆಲ್ಲರೂ ದುಡಿಯುತ್ತಿದ್ದೇವೆ ಎಂದರು.
ಈಗ ಎಲ್ಲೆಲ್ಲೂ ಬಿಜೆಪಿ ಗೆಲುವಿನ ನಗೆ ಬೀರುತ್ತಿದೆ. ಪಕ್ಷದ ಅಸ್ತಿತ್ವವೇ ಇಲ್ಲದ ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಭಾರಿ ಅಂತರದ ಗೆಲುವನ್ನು ಪಕ್ಷ ಸಾಧಿಸಿತು. ಇದರ ಹಿಂದೆ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್ ಅವರ ಪಾತ್ರ ದೊಡ್ಡದು ಎಂದರು.
ರಾಜರಾಜೇಶ್ವರಿ ನಗರದಲ್ಲಿಯೂ ಸಹ ಕಾಂಗ್ರೆಸ್‌ನಿಂದ ಬಂದಂತಹ ಮುನಿರತ್ನ ಅವರು ಬರೋಬ್ಬರಿ 57 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇದಕ್ಕೆ ಮೂಲ ಕಾರಣ ಚಕ್ರವರ್ತಿ ಅಶೋಕ್ ಕಾರಣ ಎಂದರು. ಮಂಡ್ಯದಲ್ಲಿ ಸಹ ಕಮಲ ಅರಳಲು ಸಾಕಷ್ಟು ಕಾರ್ಯಗಳನ್ನು ನಾವು ಮಾಡಿದ್ದೇವೆ.
ಇಲ್ಲಿನ ಡಿಸಿಸಿ ಬ್ಯಾಂಕ್‌ಗೆ ನಾಮಿನೇಶನ್ ಮಾಡಿ, ಅದಕ್ಕೆ ಬಿಜೆಪಿಯ ಒಬ್ಬ ಯುವಕ ಕಾರ್ಯಕರ್ತ ಸಿ ಪಿ ಉಮೇಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಇನ್ನು ಮುಂದೆ ಸಹ ಸಹಕಾರ ಕ್ಷೇತ್ರದ ಪ್ರಮುಖ ಸ್ಥಾನಗಳಿಗೆ ಬಿಜೆಪಿಯವರೇ ಆಯ್ಕೆಯಾಗಬೇಕು ಎಂಬ ನಿಟ್ಟಿನಲ್ಲಿ ನಾನು ಗುರಿಯನ್ನು ಹಾಕಿಕೊಂಡಿದ್ದೇನೆ.
ಮಂಡ್ಯದ ಆಲೆಮನೆಗೆ ಆತ್ಮನಿರ್ಭರ ಪ್ರಯೋಜನ : ಮಂಡ್ಯದಲ್ಲಿ ಆಲೆಮನೆಗೆ ಆತ್ಮನಿರ್ಭರ ಯೋಜನೆ ಮೂಲಕ ಬಲ ತುಂಬುವ ನಿಟ್ಟಿನಲ್ಲಿ ಈಗಾಗಲೇ ಕಾರ್ಯಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ಅನುದಾನವನ್ನು ಯೋಜನೆಯಡಿ ಕೊಡಬೇಕೆಂದು ಕೇಂದ್ರ ಸರ್ಕಾರವೇ ಗುರುತಿಸಿದೆ. ಈ ಹಿನ್ನೆಲೆ ನಾನೂ ಸಹ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದರು.
ಆತ್ಮನಿರ್ಭರ ಅಡಿ 600 ಕೋಟಿ ರೂ. ಪ್ರಸ್ತಾವನೆ : ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ ನಮ್ಮ ಸಹಕಾರ ಇಲಾಖೆಗೆ 4750 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಅದರಲ್ಲಿ ಮೊದಲ ವರ್ಷದ ಭಾಗವಾಗಿ ಸುಮಾರು 600 ಕೋಟಿ ರೂಪಾಯಿ ಅನುದಾನಕ್ಕಾಗಿ ಕರ್ನಾಟಕ ಸರ್ಕಾರದಿಂದ ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ.
ಮೂರು, ನಾಲ್ಕು ವರ್ಷದಲ್ಲಿ 4750 ಕೋಟಿ ರೂಪಾಯಿ ಅನುದಾನ ನಮ್ಮ ಸಹಕಾರ ಇಲಾಖೆ ಮುಖಾಂತರ ಪಡೆದು ಸಮರ್ಪಕವಾಗಿ ಜನರಿಗೆ ತಲುಪಿಸುವಲ್ಲಿ ಕಾರ್ಯನಿರ್ವಹಿಸುತ್ತೇವೆ. ಇದರಲ್ಲಿ ಹೈನುಗಾರಿಗೆ, ಮೀನುಗಾರಿಕೆ ಸೇರಿ ಎಲ್ಲ ವರ್ಗಗಳಿಗೂ ಆರ್ಥಿಕ ಬಲ ತುಂಬಲು ಪ್ರತಿ ಜಿಲ್ಲೆಯಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಬೆಳೆ ಸಾಲ ನೀಡುವ ಗುರಿಯನ್ನು ನಮ್ಮ ರಾಜ್ಯ ಸರ್ಕಾರದ ವತಿಯಿಂದ ಹಾಕಿಕೊಳ್ಳಲಾಗಿದೆ.
ಈಗಾಗಲೇ 15 ಲಕ್ಷ ರೈತರಿಗೆ 10 ಸಾವಿರ ಕೋಟಿ ರೂ. ಹಣವನ್ನು ಅಪೆಕ್ಸ್ ಬ್ಯಾಂಕ್ ಹಾಗೂ 21 ಡಿಸಿಸಿ ಬ್ಯಾಂಕ್‌ಗಳ ಮುಖಾಂತರ ನೀಡಲಾಗಿದೆ. ಕೆಲವೇ ದಿನಗಳಲ್ಲಿ 24.50 ಲಕ್ಷ ರೈತರಿಗೂ 15,300 ಕೋಟಿ ರೂಪಾಯಿು ಸಾಲವನ್ನು ನೀಡಿ ಗುರಿ ಮುಟ್ಟುತ್ತೇವೆ.
ಇದೇ ಆರ್ಥಿಕ ಸ್ಪಂದನ ಕಾರ್ಯಕ್ರಮ ಮೂಲಕ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳ ಮುಖಾಂತರ 39,300 ಕೋಟಿ ರೂಪಾಯಿ ಸಾಲ ನೀಡುವ ಕಾರ್ಯಕ್ರಮಕ್ಕೂ ಚಾಲನೆ ನೀಡಿದ್ದೇವೆ ಎಂದು ಸಹಕಾರ ಸಚಿವರಾದ ಸೋಮಶೇಖರ್ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.