ಮಂಡ್ಯ: ಹಲವು ವರ್ಷಗಳ ಬಳಿಕ ಮಾಜಿ ಸಂಸದೆ ರಮ್ಯ ರಾಜಕಾರಣಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಸಕ್ಕರೆ ನಾಡು ಮಂಡ್ಯದಲ್ಲಿ ಕೈ ಅಭ್ಯರ್ಥಿ ಗಣಿಗ ರವಿಕುಮಾರ್ ಪರ ಪ್ರಚಾರ ನಡೆಸಿದ್ದಾರೆ. ನಗರದಲ್ಲಿ ಮಾಜಿ ಸಂಸದೆ ರಮ್ಯಾ ಭಾಷಣ ಮಾಡಿ, ಪ್ರಿಯಾಂಕಾ ಗಾಂಧಿ ಅವರು ಮೊದಲ ಬಾರಿಗೆ ನಮ್ಮೂರಿಗೆ ಬಂದಿದ್ದು, ಅವರಿಗೆ ಸ್ವಾಗತ. ನಾನು ನಿಮ್ಮಲ್ಲಿ ವಿನಂತಿ ಮಾಡ್ತೀನಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು. ಮಂಡ್ಯ ಜಿಲ್ಲೆಯ ಎಲ್ಲಾ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಮಂಡ್ಯ ಜಿಲ್ಲೆಯ ಜನರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮತಯಾಚನೆ ಮಾಡಿದರು.
ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಾನು ಮಂಡ್ಯಕ್ಕೆ ಬರ್ತಾ, ಹೋಗ್ತಾ ಇದೀನಿ. ಮೊನ್ನೆ ನಿಮಿಷಾಂಭ ದೇವಸ್ಥಾನಕ್ಕೆ ಬಂದಿದ್ದೆ.
ಮಂಡ್ಯದಲ್ಲಿ ನಮ್ಮ ಸಂಬಂಧಿಕರು ನೆಂಟರು ಇದ್ದಾರೆ. ನಾನು ಯಾವಾಗಲೂ ಬರ್ತಾ ಇರ್ತೀನಿ, ಕಾಣಿಸಿಕೊಳ್ಳಲ್ಲ ಅಷ್ಟೇ. ಇವತ್ತು ನಾನು ಸ್ಟಾರ್ ಕ್ಯಾಂಪೇನರ್ ಆಗಿ ಬಂದಿದ್ದೇನೆ ಅಷ್ಟೇ. ಕಾಂಗ್ರೆಸ್‌ಗೆ ಸಪೋರ್ಟ್ ಮಾಡಲು ನಾನು ಬಂದಿದ್ದೇನೆ. ಸಕ್ರಿಯ ರಾಜಕೀಯಕ್ಕೆ ಬರುವುದಾಗಿ ಯೋಚನೆ ಮಾಡಿಲ್ಲ ಎಂದರು.
ಅಂಬರೀಶ್ ಸಾವನ್ನಪ್ಪಿದ ಸಂದರ್ಭದಲ್ಲಿ ರಮ್ಯ ಬರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನಗೆ ಆಗ ಟ್ಯೂಮರ್ ಬಂದಿತ್ತು. ನಾನು ಆಗ ಸರ್ಜರಿ ಮಾಡಿಸಿದ್ದೆ. ನಾನು ಪಬ್ಲಿಕ್ ಆಗಿ ಬಂದು ದುಃಖ ಹಂಚಿಕೊಳ್ಳೋ ಅಭ್ಯಾಸ ಇಲ್ಲ. ಬೇರೆ ಅವರು ಬಂದು ಕ್ಯಾಮರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ. ನಾನು ಚಿಕ್ಕವಳಿಂದ ಸ್ವತಂತ್ರವಾಗಿ ಇದ್ದೇನೆ. ನಾನು ಏನೇ ಇದ್ರು ಕೆಲಸದ ಬಗ್ಗೆ ಮಾತಾಡುತ್ತೇನೆ ಅಷ್ಟೇ. ಪರ್ಸನಲ್ ವಿಷಯಗಳನ್ನು ಮಾತನಾಡಲು ಹೋಗಲ್ಲ. ಹೀಗಾಗಿ ಎಲ್ಲರೂ ಏನೇನೋ ಹಬ್ಬಿಸುತ್ತಾರೆ. ಅಪಪ್ರಚಾರ ಮಾಡಿರುವುದು ನನಗೆ ಬೇಸರವಾಗಿದೆ ಎಂದರು.
ನನಗೆ ಗೊತ್ತು ನಾನು ಯಾರು ಅಂತ. ನನಗೆ ತುಂಬಾ ನೋವಾಗಿದೆ. ಕೆಲವರು ತಪ್ಪು ತಿಳಿದುಕೊಂಡಿದ್ದಾರೆ. ನನಗೆ ಆಗ ಟ್ಯೂಮರ್ ಇತ್ತು. ಅದಾದ ಮೇಲೆ ನಂಗೆ ತುಂಬಾ ತೊಂದರೆ ಆಯ್ತು. ಅದರ ಬಗ್ಗೆ ಹೇಳಿ ಸಿಂಪತಿ ತೆಗೆದುಕೊಳ್ಳೋಕೆ ಇಷ್ಟ ಇಲ್ಲ ಎಂದು ಹೇಳಿದರು.
ನಾನು ಈಗ ಸ್ಟಾರ್ ಕ್ಯಾಂಪೇನರ್ ಅಷ್ಟೇ : ಮಂಡ್ಯ ರಾಜಕೀಯಕ್ಕೆ ಬರುವ ವಿಚಾರವಾಗಿ ಮಾತನಾಡಿ, ನಾನು ಈಗ ಬಂದಿರೋದು ಮಂಡ್ಯ ಜಿಲ್ಲೆಯ ಅಭ್ಯರ್ಥಿಗಳ ಪರವಾಗಿ. ಅವರ ಪರವಾಗಿ ಮತಯಾಚನೆಗೆ ಬಂದಿದ್ದೇನೆ. ನಾನು ಈಗ ಸ್ಟಾರ್ ಕ್ಯಾಂಪೇನರ್ ಅಷ್ಟೇ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ನಾನು ಯೋಚನೆ ಮಾಡಿಲ್ಲ. ಅದಕ್ಕೆ ತುಂಬಾ ಟೈಮ್ ಇದೆ. ನಾನು ಸಿನಿಮಾಗೆ ಬಂದಿರೋದು ಪ್ರೊಡಕ್ಷನ್ ರೆಡಿ ಮಾಡ್ತಾ ಇದೀನಿ. ನಾನು ಸಹ ದುಡಿಯಬೇಕು ಅಲ್ವಾ?. ಸಿನಿಮಾ ರಾಜಕೀಯ ಬಿಟ್ಟು ತುಂಬಾ ವರ್ಷ ಆಗಿದೆ. ಅದಕ್ಕೆ ಸಿನಿಮಾ ಕ್ಷೇತ್ರಕ್ಕೆ ಬಂದಿದ್ದೇನೆ ಎಂದು ಹೇಳಿದರು.
ನಾನು ಯಾವಾಗಲೂ ಮಂಡ್ಯದವಳು: ನಾನು ಉತ್ತರಕಾಂಡ ಸಿನಿಮಾಗೆ ಸಹಿ ಮಾಡಿದ್ದೇನೆ. ಮಂಡ್ಯದಲ್ಲಿ ತೊಟ್ಟಿ ಮನೆ ಮಾಡಿ ಇಲ್ಲೇ ಉಳಿಯುತ್ತೇನೆ ಎಂಬ ಭರವಸೆ ವಿಚಾರವಾಗಿ ಮಾತನಾಡಿ, ನಮ್ಮ ತಾತಂದು ಗೋಪಾಲಪುರದಲ್ಲಿ ತೊಟ್ಟಿ ಮನೆ ಇದೆ. ನನಗೂ ಒಂದು ತೊಟ್ಟಿಮನೆ ಮಾಡಬೇಕು ಎಂಬ ಆಸೆ ಇದೆ. ಅದು ಇವತ್ತು, ನಾಳೆ, ಯಾವಾಗ ಆಗುತ್ತೆ ಅಂತಾ ಗೊತ್ತಿಲ್ಲ. ನನಗೆ ತೊಟ್ಟಿಮನೆ ಮಾಡೋಕೆ ಆಸೆ ಇದೆ. ನಾನು ಯಾವಾಗಲೂ ಮಂಡ್ಯದವಳು. ನಾನು ಗೌಡತಿ ಎಂಬುದನ್ನು ಯಾರು ಕಿತ್ತುಕೊಳ್ಳಲು ಆಗಲ್ಲ. ನಮ್ಮ ತಾಯಿ ಊರು ಮಂಡ್ಯ, ನಮ್ಮ ತಂದೆ ಸತ್ತಿದ್ದು ಇಲ್ಲೇ. ನನ್ನ ಅಭ್ಯರ್ಥಿ ಮಾಡಿದ್ದು ಇಲ್ಲೆ. ಮಂಡ್ಯ ಜಿಲ್ಲೆಯ ಜನರು ನನಗೆ ಬೆಂಬಲ ನೀಡಿದ್ದಾರೆ. ಈ ಅಭಿಮಾನವನ್ನು ನಾನು ಯಾವತ್ತು ಮರೆಯಲ್ಲ, ಕಮ್ಮಿಯೂ ಆಗಲ್ಲ. ಮಂಡ್ಯ ಸಂಬಂಧ ಕೇವಲ ರಾಜಕೀಯ ಅಲ್ಲ, ನನಗೆ ಕುಟುಂಬದ ರೀತಿ ಎಂದು ರಮ್ಯ ಹೇಳಿದ್ರು.
ಮಂಡ್ಯದಲ್ಲಿ ಸ್ವಯಂ ವರ ಸ್ಪರ್ಧೆ ಮಾಡಿ: ಇನ್ನು ರಮ್ಯಾ ಮದುವೆ ಯಾವಾಗ? ಎಂಬ ಅಭಿಮಾನಿಗಳ ಪ್ರಶ್ನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ಫಸ್ಟ್ ಹುಡುಗನನ್ನ ಹುಡುಕಿ. ಗೌಡರ ಹುಡುಗ ಸಿಕ್ತಾರೆ ಅಂದ್ರೆ ನೋಡಿ. ನೀವೇ ಹುಡುಕಿ ನನಗೆ ಒಬ್ಬರು ಕಾಣಿಸ್ತಿಲ್ಲ. ನನಗೂ ಹುಡುಗನನ್ನು ನೋಡಿ ನೋಡಿ ಸಾಕಾಗೋಯ್ತು. ಮಂಡ್ಯದಲ್ಲಿ ಸ್ವಯಂವರ ಸ್ಪರ್ಧೆ ಮಾಡಿ ಎಂದು ನಸುನಕ್ಕರು.
ಇದನ್ನೂ ಓದಿ: ಜಿ ಪರಮೇಶ್ವರ್ ಗೆದ್ರೆ ನನಗಾಗುವಷ್ಟು ಸಂತೋಷ ಬೇರೆ ಯಾರಿಗೂ ಆಗಲ್ಲ : ಮಾಜಿ ಸಿಎಂ ಸಿದ್ದರಾಮಯ್ಯ