ಮಂಡ್ಯ : ಮುಂದಿನ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡಬೇಕು. ಒಂದು ವೇಳೆ ಅವರು ನಿರಾಕರಿಸಿದರೆ ನಾನೇ ಅಭ್ಯರ್ಥಿಯಾಗಿ ನಿಲ್ಲುತ್ತೇನೆ. ನನ್ನ ಎದುರು ಸಚಿವ ಚಲುವರಾಯಸ್ವಾಮಿ ಅವರೇ ಸ್ಪರ್ಧಿಸಬೇಕು. ಜನ ನನ್ನನ್ನು ಮತ್ತೆ ನಿರಾಕರಿಸಿದರೆ ರಾಜಕೀಯವಾಗಿ ಒಂದು ನಿರ್ಧಾರವನ್ನು ತೆಗೆದುಕೊಳ್ಳಲು ತಯಾರಿದ್ದೇನೆ ಎಂದು ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ಇಂದು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನಿಖಿಲ್ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಮಂಡ್ಯ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯ. ಕುಮಾರಸ್ವಾಮಿ ಅವರು ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಕಳೆದ ಬಾರಿ ನಿಖಿಲ್ ಕುಮಾರಸ್ವಾಮಿ ಅವರು ಕಡಿಮೆ ಅಂತರದಲ್ಲಿ ಸೋತಿದ್ದಾರೆ. ರಾಮನಗರದಲ್ಲೂ ಷಡ್ಯಂತ್ರಗಳಿಂದ ಸೋಲು ಕಂಡಿದ್ದಾರೆ. ನಮಗೆ ಕೃತಜ್ಞತೆ ಇದ್ದು ಅವರೇ ನಿಲ್ಲಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ. ಈ ಬಗ್ಗೆ ವರಿಷ್ಠರ ಗಮನಕ್ಕೂ ತರಲಾಗಿದೆ. ಅವರು ಈ ಬಗ್ಗೆ ಪರಶೀಲಿಸಿ ನಿರ್ಧಾರ ಮಾಡಬೇಕಷ್ಟೆ. ನಿಖಿಲ್ ಅವರೇ ಮಂಡ್ಯದ ಅಭ್ಯರ್ಥಿ ಆಗಬೇಕು" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಾನು ಟಿಕೆಟ್ ಆಕಾಂಕ್ಷಿ.. "ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸದೇ ಇದ್ದರೆ, ನಾನೂ ಒಬ್ಬ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ನಮ್ಮ ಮೊದಲ ಆದ್ಯತೆ ನಿಖಿಲ್ ಕುಮಾರಸ್ವಾಮಿ ಅವರೇ. ಅವರು ನಿಲ್ಲಲ್ಲ ಎಂದಾಗ ನಾನು ಆಕಾಂಕ್ಷಿ. ಬಿಜೆಪಿ, ಜೆಡಿಎಸ್ ನಡುವೆ ಹೊಂದಾಣಿಕೆಯಾಗಿ ನಮಗೆ ಬಿಟ್ಟು ಕೊಟ್ಟರೆ ನಾವು ಕ್ಲೈಮ್ ಮಾಡುತ್ತೇವೆ. ಎಲ್ಲೆಲ್ಲಿ ಜೆಡಿಎಸ್ ಬಲಿಷ್ಠವಾಗಿದೆಯೋ, ಈ ಎಲ್ಲಾ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡುತ್ತಾರೆ" ಎಂದರು.
ನನ್ನ ವಿರುದ್ಧ ಚಲುವರಾಯಸ್ವಾಮಿ ನಿಂತರೆ ಉತ್ತಮ: "ನಾನು ಅಭ್ಯರ್ಥಿಯಾಗಿ ನಿಂತಲ್ಲಿ ನನ್ನ ವಿರುದ್ಧ ಸಚಿವ ಚಲುವರಾಯಸ್ವಾಮಿ ಸ್ಪರ್ಧಿಸಿದರೆ ಒಳ್ಳೆಯದು. ಅವರ ಆಡಳಿತವನ್ನು ಜನರು ಒಪ್ಪಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಭಿವೃದ್ಧಿ ಅನ್ನೋದು ಯದ್ಧೋಪಾದಿಯಲ್ಲಿ ನಡೆಯುತಿದೆ. ಅವರಿಗಿಂತ ಜಿಲ್ಲೆಯಲ್ಲಿ ಸಮರ್ಥ ನಾಯಕರಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿದಿರುವುದೇ ಅವರಿಂದ. ನನಗೆ ಅವರ ವಿರುದ್ಧವೇ ಸ್ಪರ್ಧಿಯಾಗಿ ನಿಲ್ಲಬೇಕು ಎಂಬುದು ಆಸೆ. ಜನರು ನನ್ನನ್ನು ಮತ್ತೊಮ್ಮೆ ತಿರಸ್ಕಾರ ಮಾಡಿದ್ರೆ ರಾಜಕೀಯವಾಗಿ ನಾನೊಂದು ನಿರ್ಧಾರವನ್ನು ತೆಗೆದುಕೊಳ್ಳಬಹುದು. ಅವರ ಎದುರು ನಿಂತು ಸೋತ್ರೆ ನನ್ನ ರಾಜಕೀಯ ಇಲ್ಲಿಗೆ ಕ್ಲೋಜ್ ಮಾಡೋಣ" ಎಂದು ಹೇಳಿದರು.
ಇದನ್ನೂ ಓದಿ: 2024ರ ಲೋಕಸಭೆಯ ಹ್ಯಾಟ್ರಿಕ್ ಗೆಲುವಿಗೆ ಗ್ಯಾರಂಟಿ ಸಿಕ್ಕಿದೆ : ಪ್ರಧಾನಿ ಮೋದಿ ವಿಶ್ವಾಸ