ಮಂಡ್ಯ: ಇಂದು ಶ್ರೀರಂಗಪಟ್ಟಣ ದಸರಾಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ನಂದಿ ಪೂಜೆ ನೆರವೇರಿಸಿ ಅಂಬಾರಿ ಹೊತ್ತ ಅಭಿಮನ್ಯುಗೆ ಸಿಹಿ ತಿನ್ನಿಸಿ, ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಸಮ್ಮುಖದಲ್ಲಿ ವೈಭವದ ಶ್ರೀರಂಗಪಟ್ಟಣ ದಸರಾ ಆರಂಭಗೊಂಡಿತು. ಅದ್ಧೂರಿ ದಸರಾಗೆ ರಾಜ್ಯ ಸರ್ಕಾರ 2 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇದರಿಂದ ಈ ಬಾರಿ ದಸರಾ ಅದ್ಧೂರಿಯಾಗಿ ನಡೆಯುತ್ತಿದ್ದು, ಅಭಿಮನ್ಯುಗೆ ಸ್ಥಳೀಯ ಕಲಾವಿದರ ವಿವಿಧ ಕಲಾ ತಂಡಗಳು ಸಾಥ್ ನೀಡಿದವು. ಪಟ ಕುಣಿತ, ಡೊಳ್ಳು ಕುಣಿತ, ಕಂಸಾಳೆ ಸೇರಿದಂತೆ ಹಲವು ಕಲಾ ತಂಡಗಳು ದಸರಾ ಮೆರವಣಿಗೆಗೆ ಮೆರುಗು ನೀಡಿದವು.
ಇನ್ನು ಶ್ರೀರಂಗಪಟ್ಟಣ ದಸರಾವನ್ನು ಮುಂದಿನ ವರ್ಷದಿಂದ ಯಾವುದೇ ಅಡೆತಡೆ ಇಲ್ಲದೆ ನಡೆಸಿಕೊಂಡು ಹೋಗಲು ನಿರ್ಧಾರ ಮಾಡಲಾಗಿದೆ. ವೇದಿಕೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಎರಡು ಎಕರೆ ಜಮೀನು ವಶಕ್ಕೆ ಪಡೆದು ಕಾರ್ಯಕ್ರಮ ರೂಪಿಸಲು ನಿರ್ಧಾರ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ತಿಳಿಸಿದರು.