ಮಂಡ್ಯ: ಬಿಜೆಪಿ ಸರ್ಕಾರದ್ದು ದ್ವೇಷದ ರಾಜಕೀಯ, ಸಮಗ್ರ ಅಭಿವೃದ್ಧಿಗೆ ಚಿಂತನೆ ಇಲ್ಲ. ದುಡ್ಡು ಹೊಡೆಯುವ ಕಾರ್ಯಕ್ರಮದ ಬಗ್ಗೆ ಮಾತ್ರ ಅವರ ಚಿಂತನೆ ಇರುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಗುಡುಗಿದರು.
ಜಿಲ್ಲೆಯ ಮದ್ದೂರು ತಾಲ್ಲೂಕಿನ ಅಣ್ಣೂರು ಗ್ರಾಮದ ಜೆಡಿಎಸ್ ಮುಖಂಡ ಅಣ್ಣೂರ್ ನವೀನ್ ಮನೆಯ ಗೃಹ ಪ್ರವೇಶಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನಿಗಮದಲ್ಲಿ ನೀರಾವರಿ ಇಲಾಖೆಗೆ ಸಮ್ಮಿಶ್ರ ಸರ್ಕಾರದಲ್ಲಿ ಕೊಟ್ಟ ಯೋಜನೆಗಳನ್ನು ವಾಪಸ್ ಪಡೆದಿದ್ದಾರೆ. ಸುಮಾರು 6 ಸಾವಿರ ಕೋಟಿ ಯೋಜನೆಯ ಕಾಮಗಾರಿ ನೀಡಲಾಗಿತ್ತು. ಇದೆಲ್ಲಾ ಅವರ ದ್ವೇಷದ ರಾಜಕೀಯ ಅಷ್ಟೇ. ಅವರು ದುಡ್ಡು ಹೊಡೆಯುವ ಕಾರ್ಯಕ್ರಮದ ಬಗ್ಗೆ ಚಿಂತನೆ ನಡೆಸ್ತಿದ್ದಾರೆ ಎಂದರು.
ಅಧಿಕಾರಿಗಳ ಗ್ರಾಮ ವಾಸ್ತವ್ಯದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗ್ರಾಮ ವಾಸ್ತವ್ಯ ಒಳ್ಳೆಯ ಕಾನ್ಸೆಪ್ಟ್. ಆದ್ರೆ ಅಧಿಕಾರಿಗಳಿಗೆ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಸರ್ಕಾರದ ಆರ್ಥಿಕ ಸಹಕಾರ ಇಲ್ಲದಿದ್ದರೆ ಅಧಿಕಾರಿಗಳು ಏನು ಮಾಡೋಕಾಗುತ್ತೆ ಎಂದು ಪ್ರಶ್ನೆ ಮಾಡಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಗ್ಗೆ ರಾಜಕೀಯವಾಗಿ ಟೀಕೆ ಮಾಡಲ್ಲ. ಮಾಡಿರುವ ಉದ್ದೇಶ ಒಳ್ಳೆಯದಾಗಿದ್ರೆ ಸರಿ. ರಾಜಕೀಯ ಸತ್ತು ಹೋಗಿದೆ, ಸದ್ಯಕ್ಕೆ ರಾಜಕೀಯದ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.