ಮಂಡ್ಯ: ಜೆಡಿಎಸ್ ಪಕ್ಷದಿಂದ ನನ್ನ ಜೀವಿತಾವಧಿಯೊಳಗೆ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಮಳವಳ್ಳಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ನಮ್ಮ ಪಕ್ಷ ಹಾಸನ ಜಿಲ್ಲಾ ಪಂಚಾಯಿತಿಗೆ ದಲಿತರೊಬ್ಬರನ್ನು ಅಧ್ಯಕ್ಷರನ್ನಾಗಿ ಮಾಡಿತ್ತು. ಆಮೇಲೆ ಅನೇಕ ದಲಿತ ನಾಯಕರು ಪಕ್ಷ, ಸರ್ಕಾರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಆ ಸಂದರ್ಭದಲ್ಲಿ ನನ್ನ ಸಹೋದರ ರೇವಣ್ಣ ಅವರೂ ಮೊದಲ ಬಾರಿಗೆ ಜಿಲ್ಲಾ ಪಂಚಾಯಿತಿಗೆ ಗೆದ್ದು ಬಂದಿದ್ದರು. ಆದರೆ, ದೇವೇಗೌಡರು ಎಂಎ ಪದವೀಧರನಾಗಿದ್ದ ದಲಿತ ಅಭ್ಯರ್ಥಿಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನಾಗಿ ಮಾಡಿದ್ದರು. ಮುಂದಿನ ದಿನಗಳಲ್ಲಿ ಜಾತ್ಯತೀತ ಜನತಾದಳದಿಂದ ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವ ಅವಕಾಶ ಬಂದೇ ಬರುತ್ತದೆ. ನಾನು ಮಣ್ಣಿಗೆ ಹೋಗುವ ಮುನ್ನ ದಲಿತ ಮುಖ್ಯಮಂತ್ರಿಯನ್ನು ಮಾಡುತ್ತೇನೆ. ಈ ನಿರೀಕ್ಷೆಯನ್ನು ಜೆಡಿಎಸ್ ಸಾಕಾರಗೊಳಿಸುತ್ತದೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಈಶ್ವರಪ್ಪ ಅರೆಸ್ಟ್ ಆಗುವವರೆಗೂ ನಮ್ಮ ಹೋರಾಟ ನಡೆಯಲಿದೆ: ಕಾಂಗ್ರೆಸ್
ನಾನು ಮೊದಲಿನಿಂದಲೂ ಜಾತ್ಯತೀತ, ಧರ್ಮಾತೀತವಾಗಿ ಕೆಲಸ ಮಾಡಿಕೊಂಡು ಬಂದವನು. ನನ್ನನ್ನು ದಿನನಿತ್ಯವೂ ಸಾವಿರಾರು ಜನರು ರಾಜ್ಯದ ಮೂಲೆ ಮೂಲೆಗಳಿಂದಲೂ ಬಂದು ಭೇಟಿ ಮಾಡುತ್ತಾರೆ. ಅವರನ್ನೆಲ್ಲ ನಾನು, ನೀವು ಯಾವ ಜಾತಿ? ಯಾವ ಧರ್ಮ? ಎಂದು ಎಂದೂ ಕೇಳಿಲ್ಲ. ನಿಮ್ಮ ಕಷ್ಟವೇನು? ಎಂದಷ್ಟೇ ಕೇಳುತ್ತೇನೆ. ಇದು ನಾನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ಧರ್ಮ ಎಂದು ಹೇಳಿದರು.