ಮಂಡ್ಯ: ಮಗು ಸೇರಿ ಇಬ್ಬರ ಸಜೀವ ದಹನವಾಗಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರು ಸಮೀಪದ ಅಗಚಹಳ್ಳಿ ಗ್ರಾಮದಲ್ಲಿ ನಡೆದಿದೆ.
ರಾತ್ರಿ ಮಲಗಿದ್ದಾಗ ಹಾಸಿಗೆಗೆ ಬೆಂಕಿ ಬಿದ್ದು ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಹಾಸನ ನಿವಾಸಿ ದೀಪಕ್ (33) ಮತ್ತು ಆತನ ಮಗ ತನ್ವಿತ್ (4) ಬೆಂಕಿಗಾಹುತಿಯಾಗಿದ್ದಾರೆ. ಘಟನೆಯಲ್ಲಿ ಮನೆ ಮಾಲೀಕ ಭರತ್ಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡಿಗೆರೆ ಮೂಲದ ಭರತ್ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮಲಗಿದ್ದ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಅಕ್ಕಪಕ್ಕದ ಮನೆಯವರು ಬೆಂಕಿ ದುರಂತ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೀಪಕ್ ತನ್ನ ಪತ್ನಿ ಜೊತೆ ಮನಸ್ತಾಪಗೊಂಡಿದ್ದ ಹಿನ್ನೆಲೆ ಮಗು ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಕಿ ಅವಘಡ ಸಂಭವಿಸಿದ್ದರ ಬಗ್ಗೆ ತನಿಖೆಗೆ ಮುಂದಾಗಿದ್ದು, ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.