ಮಂಡ್ಯ: ನಾನು ಉಳುಮೆ ಮಾಡುವ ಜಮೀನಿಗೆ ಅಧಿಕಾರಿಗಳು ಖಾತೆ ಮಾಡಿ ಕೊಡುತ್ತಿಲ್ಲ. ಹೀಗಾಗಿ ನನ್ನ ಸಮಸ್ಯೆ ಬಗೆಹರಿಸಿಕೊಡಿ, ಇಲ್ಲದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಷದ ಬಾಟಲಿ ಹಿಡಿದು ಸಚಿವ ನಾರಾಯಣ ಗೌಡ ಮುಂದೆ ರೈತನೊಬ್ಬ ಅಳಲು ತೋಡಿಕೊಂಡಿದ್ದಾನೆ.
ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಮಂಜುನಾಥ್ ಸಮಸ್ಯೆ ಹೇಳಿಕೊಂಡ ರೈತ. ಸಚಿವರಿದ್ದ ಪ್ರವಾಸಿ ಮಂದಿರಕ್ಕೆ ಬಂದ ಈತ, ತಮ್ಮ ಗ್ರಾಮದ ಕೆಲವು ರೈತರು ಕಳೆದ 40 ವರ್ಷಗಳಿಂದ ಭೂಮಿಯಲ್ಲಿ ಅನುಭವದಾರರಾಗಿದ್ದಾರೆ. ಆದರೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಕಂದಾಯ ಅಧಿಕಾರಿಗಳಿಗೆ ಖಾತೆ ಮಾಡಿಕೊಡಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಏಕಾಏಕಿ ಜಮೀನಿನಲ್ಲಿ ಉಳುಮೆ ಮಾಡದಂತೆ ಅಧಿಕಾರಿಗಳು ತಡೆಯಲು ಮುಂದಾಗಿದ್ದಾರೆ. ಇದರಿಂದ ಇಲ್ಲಿನ ರೈತರೆಲ್ಲರೂ ಸಂಕಷ್ಟಕ್ಕೊಳಗಾಗಲಿದ್ದಾರೆ ಎಂದು ಹೇಳಿದ್ದಾನೆ.
ಅಧಿಕಾರಿಗಳ ಬಳಿ ಎಷ್ಟೇ ಬಾರಿ ಮನವಿ ಮಾಡಿದ್ದರೂ ಸಹ ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ. ಸಮಸ್ಯೆ ಬಗೆಹರಿಸದಿದ್ದರೆ ನಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಸಚಿವ ನಾರಾಯಣಗೌಡ ಮುಂದೆ ಮಂಜುನಾಥ್ ಹೇಳಿದ್ದಾನೆ.
ಮಂಜುನಾಥ್ ಮನವಿಗೆ ಸ್ಪಂದಿಸಿದ ಸಚಿವರು, ಕೂಡಲೇ ಸಮಸ್ಯೆ ಬಗೆಹರಿಸಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ವರ್ತನೆಯಿಂದ ಗಾಬರಿಗೊಂಡ ಸಚಿವರು ಸ್ಥಳಕ್ಕೆ ಪೊಲೀಸರನ್ನು ಕರೆಸಿ ಮಂಜುನಾಥ್ನನ್ನು ವಶಕ್ಕೆ ಪಡೆದು ಆತನ ಕುಟುಂಬದವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವಂತೆ ತಿಳಿಸಿದ್ದಾರೆ.