ಮಂಡ್ಯ: ಜಿಲ್ಲೆಯಲ್ಲಿ ಶೇಕಡಾ 80ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದು, ಇದರ ಜೊತೆ ಜೊತೆಗೆ ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ಇದೀಗ ಅವುಗಳು ಕಟಾವಿಗೆ ಬಂದಿದ್ದು, ಮಾರುಕಟ್ಟೆಯಿಲ್ಲದೆ ರೈತರು ಸಂಕಷ್ಟಕ್ಕೀಡಾಗಿದ್ದರು. ಇದನ್ನರಿತು ಜಿಲ್ಲಾಡಳಿತ ಸಹಾಯಕ್ಕೆ ಮುಂದಾಗಿದೆ.
ದೇಶಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಆರ್ಥಿಕತೆ ಮೇಲೆ ಸಾಕಷ್ಟು ಪರಿಣಾಮ ಬೀರಿದೆ. ಮೂಲಗಳ ಪ್ರಕಾರ ಜಿಲ್ಲೆಯಲ್ಲಿ ಸುಮಾರು 20 ಟನ್ ತರಕಾರಿ ಬೆಳೆಗಳು ಕಟಾವಿಗೆ ಬಂದಿದ್ದು, ಲಾಕ್ಡೌನ್ ಪರಿಣಾಮ ಯಾವುದೇ ವ್ಯಾಪಾರ ವಾಹಿವಾಟು ನಡೆಯದ ಕಾರಣ ಬೆಳೆಗಾರರು ಹಾಗೂ ರೈತರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನರಿತ ಜಿಲ್ಲಾಡಳಿತ ಎಪಿಎಂಸಿ ಹಾಗೂ ಹಾಪ್ ಕಾಮ್ಸ್ ಮೂಲಕ ತರಕಾರಿ ಖರೀದಿಗೆ ನಿರ್ಧಾರ ಕೈಗೊಳ್ಳುತ್ತಿದ್ದಂತೆ ರೈತರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ.
ಜಿಲ್ಲಾಡಳಿತ ಹಾಗೂ ತೋಟಗಾರಿಕೆ ಇಲಾಖೆ ಬೆಳೆಗಳ ಸರ್ವೆ ಮಾಡಿದ್ದು, ಸರ್ವೆ ನಂತರ ಖರೀದಿಗೆ ಕ್ರಮ ವಹಿಸಿವೆ. ಇದರ ಜೊತೆಗೆ ಖಾಸಗಿ ವ್ಯಾಪಾರಿಗಳು ತರಕಾರಿ ಖರೀದಿ ಮಾಡಿ ನಿಗದಿತ ಪ್ರದೇಶದಲ್ಲಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಪ್ರತಿಯೊಂದು ಬಡಾವಣೆಯಲ್ಲಿ ಎರಡು ಮೂರು ಕಡೆ ಮಾರುಕಟ್ಟೆ ಪ್ರಾರಂಭ ಮಾಡಿ ಜನರಿಗೆ ಹಾಗೂ ರೈತರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಗಿದೆ. ಆದರೂ ಕೆಲ ರೈತರು ಮಾಹಿತಿ ಕೊರತೆಯಿಂದ ಬೆಳೆಗಳ ನಾಶ ಮಾಡಿದ್ದಾರೆ.
ಜಿಲ್ಲಾಡಳಿತ ತರಕಾರಿ ಬೆಳೆಗಳ ದರ ನಿಗದಿ ಮಾಡಿದರೂ ರೈತರಿಗೆ ಅದರ ಮಾಹಿತಿ ಸಿಗುತ್ತಿಲ್ಲ. ಇನ್ನಾದರೂ ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳಬೇಕಾಗಿದೆ.