ಮಂಡ್ಯ: ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಬಂದ್ಗೆ ಕರೆ ನೀಡಿದ್ದ ರೈತ ಸಂಘಟನೆಗಳ ಕಾರ್ಯಕರ್ತರು ಸಂಜಯ ಸರ್ಕಲ್ನಲ್ಲಿ ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಸಂಜಯ ವೃತ್ತದಲ್ಲಿ ಟ್ರ್ಯಾಕ್ಟರ್, ಎತ್ತಿನ ಗಾಡಿಗಳು ಹಾಗೂ ನೂರಾರು ಬೈಕ್ಗಳನ್ನು ರಸ್ತೆ ಮಧ್ಯೆ ನಿಲ್ಲಿಸಿ ಬೆಳಿಗ್ಗೆಯಿಂದ ರೈತರು ಪ್ರತಿಭಟನೆಗಿಳಿದಿದ್ದಾರೆ. ಮಂಡ್ಯ ಬಂದ್ಗೆ ಕರೆ ನೀಡಿದ್ದರೂ, ಸರ್ಕಾರಿ ಬಸ್ಗಳು ಸಂಚರಿಸುತ್ತಿದ್ದ ಕಾರಣ ರೈತರು ಆಕ್ರೋಶಗೊಂಡು ಬಸ್ ಚಲಿಸದಂತೆ ರಸ್ತೆಯಲ್ಲೇ ಅಡ್ಡಲಾಗಿ ಮಲಗಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಹೆದ್ದಾರಿ ತಡೆಯಿಂದಾಗಿ ಸುಮಾರು ಒಂದು ಕಿಮೀವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಇನ್ನು ಮಂಡ್ಯ ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ರೈತ ಕಾರ್ಯಕರ್ತರು ಬೈಕ್ ರ‍್ಯಾಲಿ ನಡೆಸುತ್ತಿದ್ದಾರೆ. ಈ ಮೂಲಕ ಬಂದ್ಗೆ ಸಹಕರಿಸುವಂತೆ ಮನವಿ ಮಾಡುತ್ತಿದ್ದಾರೆ.
ಕಳೆದ 40 ದಿನಗಳಿಂದ ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಹಲವಾರು ರಾಜಕೀಯ ನಾಯಕರು ಭೇಟಿ ನೀಡಿ ಬೇಡಿಕೆ ಈಡೇರಿಸುತ್ತೇವೆ ಎಂದು ಆಶ್ವಾಸನೆ ನೀಡಿದ್ದರೂ, ಪ್ರತಿಭಟನೆ ಕೈ ಬಿಟ್ಟಿರಲಿಲ್ಲ. ಆದರೆ ಸರ್ಕಾರದ ಕಡೆಯಿಂದ ಸರಿಯಾದ ಸ್ಪಂದನೆ ಸಿಗದಿದ್ದರಿಂದ ರೈತ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಇಂದು ಮಂಡ್ಯ ಬಂದ್ಗೆ ಕರೆ ನೀಡಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದ ಮಂಡ್ಯ ನಗರ ಬಂದ್ಗೆ ವರ್ತಕರು, ಲಾರಿ, ಆಟೋ ಚಾಲಕರು, ಸಿಐಟಿಯು ಸೇರಿದಂತೆ ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ.
ಇದನ್ನೂ ಓದಿ: ಕಬ್ಬು ಬೆಳೆಗಾರರಿಂದ ನಡೆಯುತ್ತಿರುವ ಧರಣಿ 10ನೇ ದಿನಕ್ಕೆ: ಭಿಕ್ಷಾ ತಟ್ಟೆ ಹಿಡಿದು ಪ್ರತಿಭಟನೆ..