ಮಂಡ್ಯ: ಮೇ. 29 ರಿಂದ ಶೈಕ್ಷಣಿಕ ವರ್ಷ ಆರಂಭಗೊಂಡಿದೆ. ಈಗಾಗಲೇ ಹಲವೆಡೆ ಖಾಸಗಿ ಶಾಲೆಗಳು ಪ್ರಾರಂಭವಾಗಿವೆ. ಇಂದಿನಿಂದ ಎಲ್ಲಾ ಸರ್ಕಾರಿ ಶಾಲೆಗಳು ಆರಂಭಗೊಂಡಿವೆ. ಈ ಹಿನ್ನೆಲೆ ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಬೇಸಿಗೆ ರಜೆ ಮುಗಿಸಿ ಶಾಲೆಗೆ ಬಂದ ಮಕ್ಕಳಿಗೆ ಗುಲಾಬಿ ಹೂ ಮತ್ತು ಚಾಕ್ಲೆಟ್ ನೀಡಿ ಸ್ವಾಗತ ಕೋರಿದ್ದಾರೆ. ಇದೇ ವೇಳೆ ಸರ್ಕಾರದಿಂದ ಉಚಿತ ಅಕ್ಕಿ ವಿತರಣೆ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಚಲುವರಸನಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಡಾಲಿ ಧನಂಜಯ್ ಇಂದು ಭೇಟಿ ಕೊಟ್ಟರು. ನವೀಕರಣ ಮಾಡಿರುವ ಶಾಲೆಯ ಕಟ್ಟಡವನ್ನು ಟೇಪ್ ಕತ್ತರಿಸಿ ಉದ್ಘಾಟನೆ ಮಾಡಿದರು. ಬಳಿಕ ಒಂದು ರೌಂಡ್ ಹೊಡೆದು ಶಾಲೆಯನ್ನು ಗಮನಿಸಿದರು. ಬಳಿಕ ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೆಟ್ ನೀಡಿ ಸ್ವಾಗತಿಸಿದರು. ಈ ವೇಳೆ ಡಾಲಿ ಧನಂಜಯ್ ಅವರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾಥ್ ನೀಡಿದರು.
ಬಳಿಕ ಮಾತನಾಡಿದ ನಟ ಧನಂಜಯ್, ಉಚಿತ ಅಕ್ಕಿ ವಿತರಣೆ ಕುರಿತು ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಯಾವುದೇ ಪಕ್ಷದ ಪರವಾಗಿ ಮಾತನಾಡುತ್ತಿಲ್ಲ. ಓರ್ವ ಸಾಮಾನ್ಯ ವ್ಯಕ್ತಿಯಾಗಿ ಗಮನಿಸಿದರೆ, ತಿಂಗಳ ಆದಾಯ ಕಡಿಮೆ ಇರುವವರಿಗೆ, ಅವರ ಹಸಿವು ನೀಗಿಸಲು ಒಂದಿಷ್ಟು ಅಕ್ಕಿ ಕೊಟ್ಟರೆ ಅದು ತಪ್ಪು ಅನಿಸುವುದಿಲ್ಲ. ಅದರಿಂದ ಜನ ಸೋಮಾರಿಗಳಾಗ್ತಾರೆ ಅನ್ನೋದು ತಪ್ಪು ಹೇಳಿಕೆ. ಹೇಗೆ ಸೋಮಾರಿಗಳಾಗ್ತಾರೆ?. ಅಕ್ಕಿ ಕೊಟ್ಟರೆ ಕೇವಲ ಊಟ ಮಾಡಿ ಮನೆಯಲ್ಲಿ ಕೂರಲು ಸಾಧ್ಯವೇ?. ಅಕ್ಕಿ ಹಸಿವು ನೀಗಿಸುತ್ತೆ, ಉಳಿದ ಖರ್ಚು ವೆಚ್ಚಗಳಿಗೆ ಮನುಷ್ಯ ದುಡಿಯುತ್ತಾನಲ್ವೇ?. ರಾಜಕೀಯ ಪಕ್ಷ, ಸರ್ಕಾರದ ಪರ ಮಾತನಾಡುತ್ತಿಲ್ಲ. ಬಡವರಿಗೆ ಸಹಾಯ ಮಾಡುವ ವಿಚಾರವಷ್ಟೇ ನನ್ನ ಅಭಿಪ್ರಾಯ ಎಂದು ತಿಳಿಸಿದರು.
ಇದನ್ನೂ ಓದಿ: ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ.. ವಿಶೇಷ ಪೂಜೆ
ಇನ್ನೂ, ಸರ್ಕಾರಿ ಶಾಲೆಗೆ ಬಂದು ನನಗೆ ಬಹಳ ಖುಷಿ ಆಯ್ತು. ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಸವಲತ್ತುಗಳು ಇರಲ್ಲ, ಸಾಕಷ್ಟು ಮಕ್ಕಳು ಶಾಲೆಯಿಂದ ಬಿಟ್ಟು ಹೋಗ್ತಾರೆ. ಅವರನ್ನು ಮತ್ತೆ ಶಾಲೆಗೆ ಕರೆತರೋದು ಶಿಕ್ಷಕರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೂಲಸೌಕರ್ಯಗಳು ಇಲ್ಲದೇ ಮುಚ್ಚಬಾರದು. ಸರ್ಕಾರಿ ಶಾಲೆಯಲ್ಲಿ ಓದಬೇಕೆಂದು ಬಹಳ ಜನ ಅಂದುಕೊಂಡಿದ್ದಾರೆ.
ವಿದ್ಯಾಭ್ಯಾಸಕ್ಕೆ ದೊಡ್ಡ ಶಾಲೆ, ಸರ್ಕಾರಿ ಶಾಲೆ ಅಂತಾ ಇಲ್ಲ. ಈ ರೀತಿಯ ಮಾದರಿ ಶಾಲೆಗಳು ಎಲ್ಲಾ ಹಳ್ಳಿಗಳಲ್ಲೂ ಇರಬೇಕು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಈ ಕಾರ್ಯಕ್ರಮ ಶ್ಲಾಘನೀಯವಾದದ್ದು. ಶಿಕ್ಷಕರು ನನ್ನ ಶಾಲೆ ಎಂದು ಅಂದುಕೊಂಡು ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳು ಉತ್ತಮವಾಗುತ್ತವೆ. ಹಲವೆಡೆ ಕೆಲಸವನ್ನು ಪ್ರೀತಿಯಿಂದ ಮಾಡೋರು ಇರುತ್ತಾರೆ. ಕೆಲಸವನ್ನು ಪ್ರೀತಿಸಿ ಮಾಡೋರನ್ನು ಉದಾಹರಣೆಯಾಗಿ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಅಭಿಷೇಕ್ ಅಂಬರೀಶ್- ಅವಿವಾ ಮದುವೆಗೆ ಸಿದ್ಧತೆ: ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?