ಮಂಡ್ಯ: ಕಾಂಗ್ರೆಸ್ ಟಿಕೆಟ್ ಅಭ್ಯರ್ಥಿಗಳ ಮೊದಲ ಪಟ್ಟಿ ನಾಳೆ ಬಿಡುಗಡೆಯಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು. ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಂಗಳವಾರ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದವರು. ಇದಕ್ಕೂ ಮುನ್ನ ಅವರು ಶ್ರೀಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಆದಿಚುಂಚನಗಿರಿ ಕಾಲಭೈರವೇಶ್ವರನ ಆಶೀರ್ವಾದ ಪಡೆದರೆ ಎಲ್ಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆಯಿದೆ. ಈ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಸೇರಿ ಹಲವರು ಭೇಟಿ ಕೊಟ್ಟ ನಂತರ ಪ್ರಧಾನಿ ಹಾಗೂ ಮುಖ್ಯಮಂತ್ರಿ ಆಗಿರುವ ಉದಾಹರಣೆ ಇದೆ. ಅದೇ ರೀತಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಪತ್ನಿ ಜೊತೆ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದಲ್ಲಿ ಸ್ವತಃ ನಿರ್ಮಲಾನಂದನಾಥ ಶ್ರೀಗಳು ಪೂಜಾ ಕೈಂಕರ್ಯ ನೆರವೇರಿಸಿದರು.
ಪೂಜೆ ಬಳಿಕ ಮಾತನಾಡಿದ ಡಿಕೆಶಿ, "ಇದು ನಮ್ಮ ಮಠ. ಹೊಸ ವರ್ಷದ ಅಮಾವಾಸ್ಯೆ, ವಿಶೇಷ ಹಬ್ಬ. ಹೀಗಾಗಿ ಮಠಕ್ಕೆ ಬಂದಿದ್ದೇನೆ. ಈ ವರ್ಷ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಗುತ್ತಿದೆ. ನಾಡಿಗೆ ಒಳ್ಳೆಯದಾಗಲಿ, ನಮಗೆ, ನಿಮಗೆಲ್ಲ ಒಳ್ಳೆಯದಾಗಲಿ. ನಾನು ನನ್ನ ಧರ್ಮಪತ್ನಿ ಅಮಾವಾಸ್ಯೆ ಪೂಜೆಯಲ್ಲಿ ಪಾಲ್ಗೊಂಡಿದ್ದೇವೆ. ಇದು ನಮಗೂ, ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ. ದೇವರನ್ನು ಕೇಳೋದು ನಾನು, ವರ ಕೊಡೋದು ದೇವರು. ಸಂಕಲ್ಪ ಮಾಡಿಕೊಳ್ಳುವುದು ನನಗೂ, ಭಗವಂತನಿಗೂ ಬಿಟ್ಟದ್ದು" ಎಂದರು.
ಇದೇ ವೇಳೆ ಟಿಕೆಟ್ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಹೈಕಮಾಂಡ್ ಆದೇಶದಂತೆ ನಾಳೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದರು.
ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ: ಉರಿಗೌಡ, ನಂಜೇಗೌಡ ವಿವಾದಕ್ಕೆ ಬ್ರೇಕ್ ವಿಚಾರವಾಗಿ ಮಾತನಾಡಿದ ಡಿ.ಕೆ ಶಿವಕುಮಾರ್ "ನಾವ್ಯಾರೂ ಹೇಡಿಗಳಲ್ಲ. ಸಿ.ಟಿ.ರವಿ, ಅಶೋಕ್, ಅಶ್ವತ್ಥ ನಾರಾಯಣ ಹೊಸದಾಗಿ ಸ್ಟೋರಿ ಬರೆಯುತ್ತಿದ್ದಾರೆ. ಸಿನಿಮಾ ತೆಗೆಯೋಕೆ ಇನ್ಯಾರೋ ಒಬ್ಬ. ಇದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸ. ಬಿಜೆಪಿಯವರ ಈ ಕೆಲಸವನ್ನ ಖಂಡಿಸುತ್ತೇನೆ. ನಮ್ಮ ಸ್ವಾಮಿಗಳು ಇದಕ್ಕೆ ಹೋರಾಟದ ನೇತೃತ್ವ ವಹಿಸಬೇಕು. ಇಲ್ಲವಾದರೆ ನಾನು ಒಂದು ಪಕ್ಷದ ಅಧ್ಯಕ್ಷನಾಗಿ ನಾನೇ ಹೋರಾಟ ಹಮ್ಮಿಕೊಳ್ಳುತ್ತೇನೆ. ಅವನ್ಯಾವನನ್ನೋ ಕರೆದು ಸಿನಿಮಾ ಮಾಡಬೇಡ ಅಂತಾ ಕೂರಿಸಿ ಮಾತಾಡಬಾರದು. ನಮ್ಮ ಒಕ್ಕಲುತನಗಳ ಬಗ್ಗೆ ಬೇಕಾದರೆ ನೂರು ಸಿನಿಮಾ ಮಾಡಲಿ. ನಾವು ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಯಾವ ಕಾರಣಕ್ಕೂ ಬಿಡೋದಿಲ್ಲ" ಎಂದು ಕಿಡಿಕಾರಿದರು.
ಒಕ್ಕಲಿಗರಿಗೆ ಕಳಂಕ ತರಲು ಬಿಜೆಪಿಯವರು ಹೊರಟಿದ್ದಾರೆ. ಉರಿಗೌಡ, ನಂಜೇಗೌಡ ಅನ್ನೋರು ಯಾರೂ ಇಲ್ಲ. ಇವರೇ ಉರಿಗೌಡ, ನಂಜೇಗೌಡ. ಮೊದಲು 40 ಪರ್ಸೆಂಟ್ ಕಮಿಷನ್ ಹಾಗೂ ಕೊರೊನಾ ಸಂದರ್ಭದ ಭ್ರಷ್ಟಾಚಾರದ ಬಗ್ಗೆ ಸಿನಿಮಾ ತೆಗೆಯಲಿ. ಈ ಬಗ್ಗೆ ಎರಡು ಸಿನಿಮಾ ತೆಗೆದರೆ ಸಾಕು. ನಾನು ಸ್ವಾಮಿಗಳ ಜತೆ ಹೋರಾಟದ ಬಗ್ಗೆ ಮಾತನಾಡಿಲ್ಲ. ನಾನುಂಟು ದೇವರುಂಟು, ಸ್ವಾಮಿಗಳುಂಟು ಎಂದರು.
ಉರಿಗೌಡ, ನಂಜೇಗೌಡ ವಿಚಾರವನ್ನ ಪಠ್ಯಕ್ಕೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ ಯಾವ ಪಠ್ಯನೂ ಇಲ್ಲ. ಅದನ್ನೆಲ್ಲ ಸ್ಕೂಲ್ ಮೇಷ್ಟ್ರು ಕೇಳಿ. ಅಶ್ವತ್ಥ ನಾರಾಯಣ, ರವಿಗೆ ಪಾಠ ಹೇಳಿಕೊಟ್ಟ ಮೇಷ್ಟ್ರನ್ನು ಕೇಳಿ. ಅವರೇನಾದ್ರೂ ಹೇಳಿಕೊಟ್ಟಿದ್ರಾ? ಎಂದು ಡಿಕೆಶಿ ವ್ಯಂಗ್ಯವಾಡಿದರು.
ಇದನ್ನೂ ಓದಿ: ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣದಿಂದ ಸಚಿವ ಮುನಿರತ್ನ ಯು-ಟರ್ನ್!