ಮಂಡ್ಯ: ಕೆ ಆರ್ ಪೇಟೆ ಕದನ ಕಣ ರಂಗೇರಿದ್ದು, ಆರೋಪ, ಪ್ರತ್ಯರೋಪಗಳು ಜೋರಾಗಿವೆ. ಪ್ರಚಾರ ಅಬ್ಬರದಲ್ಲಿ ಜೆಡಿಎಸ್ನ ಶಾಸಕ, ಮಾಜಿ ಸಚಿವ ಡಿ ಸಿ ತಮ್ಮಣ್ಣ ವಿವಾದಾತ್ಮಕ ಹೇಳಿಕೆ ಮೂಲಕ ಪಕ್ಷವನ್ನು ಮುಜುಗರಕ್ಕೀಡು ಮಾಡಿದ್ದಾರೆ.
ಹೌದು, ಬುಧವಾರ ಜೆಡಿಎಸ್ ಅಭ್ಯರ್ಥಿ ಪರ ಕಿಕ್ಕೇರಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಡಿ ಸಿ ತಮ್ಮಣ್ಣ ಅವರು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಅವರನ್ನು ಗೆಲ್ಲಿಸಿದರೆ, ಅವರು ಕೆ ಆರ್ ಪೇಟೆಯನ್ನು ಮುಂಬೈನ ಕಾಮಾಟಿಪುರ ಮಾಡ್ತಾರೆ ಅಷ್ಟೇ ಎನ್ನುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಮಾಜಿ ಸಚಿವ ಮತ್ತು ದೇವೇಗೌಡರ ಸಂಬಂಧಿಯೂ ಆಗಿರುವ ಆಗಿರುವ ಡಿ.ಸಿ. ತಮ್ಮಣ್ಣರ ಈ ಹೇಳಿಕೆ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.
ಏನಿದು ಕಾಮಾಟಿಪುರ? : ಬೈನ ಕಾಮಾಟಿಪುರ ರೆಡ್ ಲೈಟ್ ಏರಿಯಾ ಆಗಿದ್ದು, ಇದು ಪರವಾನಿಗೆ ಹೊಂದಿದ ವೇಶ್ಯಾವಾಟಿಕೆ ಸ್ಥಳವಾಗಿದೆ. ವೇಶ್ಯಾವಾಟಿಕೆ ಸ್ಥಳಕ್ಕೂ ಕೆ.ಆರ್.ಪೇಟೆಗೂ ಏನೂ ನಂಟು ಎಂಬುದೇ ಇಲ್ಲಿಯ ಪ್ರಶ್ನೆಯಾಗಿದೆ.
ಇನ್ನು, ಡಿ ಸಿ ತಮ್ಮಣ್ಣ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ನಾರಾಯಣಗೌಡ ಗರಂ ಆಗಿದ್ದಾರೆ. ತಮ್ಮಣ್ಣ ಮೊದಲು ಕ್ಷೇತ್ರದ ಮಹಿಳೆಯರ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದಾರೆ. ಕಾಮಾಟಿಪುರದ ಅನುಭವ ಇರುವುದರಿಂದಲೇ ತಮ್ಮಣ್ಣ ಇಂತಹ ಮಾತುಗಳನ್ನು ಆಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮುಂಬೈನ ಕಾಮಾಟಿಪುರ ಉಪ ಚುನಾವಣೆಯಲ್ಲಿ ಚರ್ಚೆಗೆ ಬಂದಿದೆ. ಮತದಾರರ ಜೊತೆಗೆ ಮಹಿಳೆಯರೂ ಈ ವಿಚಾರವಾಗಿ ಗರಂ ಆಗಿದ್ದಾರೆ. ಡಿ ಸಿ ತಮ್ಮಣ್ಣರ ಈ ಹೇಳಿಕೆ ಜೆಡಿಎಸ್ಗೂ ನುಂಗಲಾರದ ತುತ್ತಾಗಿದೆ.