ಮಂಡ್ಯ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಇಂದು ಅಮೆರಿಕಾಗೆ ತೆರಳಿದ್ದಾರೆ. ಅಮೆರಿಕಾದಲ್ಲಿರುವ ಪತ್ನಿ ಹಾಗೂ ಮಕ್ಕಳನ್ನು ನೋಡಲು ದರ್ಶನ್ ಪುಟ್ಟಣ್ಣಯ್ಯ ತೆರಳಿದ್ದಾರೆ. ಜೂನ್ 12ರಂದು ಹಿಂದಿರುಗಲಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ದರ್ಶನ್ ಪುಟ್ಟಣ್ಣಯ್ಯ 23 ಡಿಸೆಂಬರ್ 2022ರಂದು ಮೇಲುಕೋಟೆಗೆ ಆಗಮಿಸಿದ್ದರು. ಡಿಸೆಂಬರ್ನಿಂದಲೇ ಚುನಾವಣೆ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರು.
ಚುನಾವಣೆ ಸಮಯದಲ್ಲಿ ಮೇಲುಕೋಟೆಗೆ ಆಗಮಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಪತ್ನಿ ಶಿಲ್ಪಾ ಸಹ ಕ್ಷೇತ್ರಕ್ಕೆ ಆಗಮಿಸಿ ಪತಿಗೆ ಬೆಂಬಲವಾಗಿ ನಿಂತಿದ್ದರು. ನಂತರ ಅಮೆರಿಕಾಕ್ಕೆ ಹಿಂದಿರುಗಿದ್ದರು. ಚುನಾವಣೆ ಬಳಿಕ ದರ್ಶನ್ ಪುಟ್ಟಣ್ಣಯ್ಯ ಕೂಡ ವಿದೇಶಕ್ಕೆ ಹಿಂದಿರುಗುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗಿತ್ತು. ಪುತ್ರ ಅಮೆರಿಕಕ್ಕೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿರುವ ದರ್ಶನ್ ಪುಟ್ಟಣ್ಣಯ್ಯ ತಾಯಿ ಸುನಿತಾ ಪುಟ್ಟಣ್ಣಯ್ಯ, ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಲು ತೆರಳಿದ್ದು, ಜೂನ್ 12ಕ್ಕೆ ಮರಳುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಕೋಟೆ ಕ್ಷೇತ್ರಕ್ಕೆ ಯಾವುದೇ ಅಭ್ಯರ್ಥಿಯನ್ನು ಹಾಕದೇ ಬೆಂಬಲ ಸೂಚಿಸಿತ್ತು. ಶಾಸಕರಾಗಿ ಆಯ್ಕೆಯಾದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಆಹ್ವಾನದ ಮೇರೆಗೆ ವಿಧಾನಸಭಾ ಕಲಾಪಕ್ಕೆ ಹಾಜರಾಗಲು ಸಾಮಾನ್ಯರಂತೆ ರೈಲಿನಲ್ಲಿ ಬೆಂಗಳೂರಿಗೆ ಬಂದಿದ್ದರು. ಪ್ರಮಾಣ ವಚನ ಸ್ವೀಕರಿಸಲು ಪಾಂಡವರಪುರ ರೈಲು ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸರಳತೆಯ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಳೆದ ನಾಲ್ಕೈದು ತಿಂಗಳಿನಿಂದ ಮೇಲುಕೋಟೆ ಕ್ಷೇತ್ರದಲ್ಲಿ ಓಡಾಡಿದ್ದ ದರ್ಶನ್ ಪುಟ್ಟಣಯ್ಯ, ಚುನಾವಣೆ ಸಮಯದಲ್ಲಿ ನಾನು ಇಲ್ಲೇ ನೆಲೆಸುವುದಾಗಿ ಹೇಳಿದ್ದರು.
ಇದೀಗ ಚುನಾವಣೆ ಮುಗಿದು ಫಲಿತಾಂಶ ಬಂದ ಹದಿನೈದೇ ದಿನದಲ್ಲಿ ಅಮೇರಿಕಾಗೆ ತೆರಳಿದ್ದಾರೆ ಹತ್ತು ದಿನಗಳ ಕಾಲ ಅಮೇರಿಕಾಗೆ ತೆರಳುತ್ತಿದ್ದೇನೆ. ಕ್ಷೇತ್ರದಲ್ಲಿನ ಕೆಲಸಗಳ ಬಗೆಗೆ ಕೆಲವರನ್ನು ನೇಮಿಸಿದ್ದೇನೆ. ಜನರು ತಮ್ಮ ಸಮಸ್ಯೆಗಳ ಬಗೆಗೆ ದೂರು ಇದ್ದರೆ ನಮಗೆ ಕರೆ ಮಾಡಿ. ನನ್ನ ಜೊತೆ ಮಾತನಾಡಬೇಕಂದ್ರೆ ಅವರಿಗೆ ಹೇಳಿ, ಅವರು ನನ್ನ ಜೊತೆಗೆ ಸಂಪರ್ಕಿಸುತ್ತಾರೆ.
ನಾನು ನನ್ನ ಹೆಂಡತಿ ಮಕ್ಕಳನ್ನು ನೋಡಿ ಐದು ತಿಂಗಳಾಗಿದೆ. ಹಾಗಾಗಿ ಹತ್ತು ದಿನಗಳ ಕಾಲ ನಾನು ಅಮೇರಿಕಾಗೆ ತೆರಳುತ್ತಿದ್ದೇನೆ. ಎಲ್ಲರು ಶಾಂತಿಯಿಂದ ಇರಿ ಎಂದು ಶಾಸಕ ಮನವಿ ಮಾಡಿದ್ದಾರೆ. ವಿಡಿಯೋ ಮೂಲಕ ಅಮೆರಿಕಾಗೆ ತೆರಳುವುದಾಗಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ ನೀಡಿದ್ದಾರೆ. ಇದೀಗಾ ಸಾಕಷ್ಟು ಚರ್ಚೆಗೆ ವೈರಲ್ ವಿಡಿಯೋ ಗ್ರಾಸವಾಗಿದೆ. ಸರ್ವೋದಯ ಕರ್ನಾಟಕ ಪಕ್ಷದಿಂದ ಸ್ಪರ್ಧಿಸಿದ್ದ ದರ್ಶನ್ ಪುಟ್ಟಣ್ಣಯ್ಯ ಅವರು ಪುಟ್ಟರಾಜು ಅವರ ವಿರುದ್ಧ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿದ್ದರು. ಮೊದಲ ಬಾರಿಗೆ ಶಾಸಕರಾಗಿರುವ ಪುಟ್ಟಣ್ಣಯ್ಯ ಅವರ ಮೇಲೆ ಕ್ಷೇತ್ರದ ಜನರಿಗೆ ಅತೀವ ನಿರೀಕ್ಷೆಯಿದೆ.
ಇದನ್ನೂ ಓದಿ: ಗುತ್ತಿಗೆದಾರ ಸಂಘದ ಕೆಂಪಣ್ಣ ನಿಯೋಗದಿಂದ ಸಿಎಂ ಸಿದ್ದರಾಮಯ್ಯ ಭೇಟಿ: ಬಾಕಿ ಬಿಲ್ ಬಿಡುಗಡೆಗೆ ಮನವಿ