ಮಂಡ್ಯ: ಲಕ್ಷ ಲಕ್ಷ ಎಣಿಸುವ ಕನಸು ಕಂಡಿದ್ದ ಅನ್ನದಾತನ ಆಸೆ ಕಮರಿದೆ. ಕಳೆದೆರಡು ವರ್ಷಗಳಿಂದ ವಿಭಿನ್ನ ಪ್ರಯೋಗದ ಮೂಲಕ ಕನಕಾಂಬರ ಹೂ ಬೆಳೆದಿದ್ದ ರೈತರ ಕಟುಂಬ ಇದೀಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಪರಿಹಾರವೇನೋ ಘೋಷಣೆಯಾಗಿದೆ. ಆದ್ರೆ ಹಾಕಿದ ಬಂಡವಾಳದಷ್ಟು ಹಣ ಸಿಗುವುದಿಲ್ಲವಲ್ಲ ಎನ್ನುವ ಆತಂಕ ರೈತರಲ್ಲಿ ಮನೆ ಮಾಡಿದೆ.
ಸಕ್ಕರೆ ನಾಡು ಮಂಡ್ಯ ಅಂದರೆ ಪ್ರಮುಖ ಬೆಳೆ ಕಬ್ಬು ಹಾಗೂ ಭತ್ತ ನೆನಪಾಗುವುದು ಸಾಮಾನ್ಯ. ಆದರೆ ಈ ನೆಲದಲ್ಲಿ ಕಬ್ಬು ಮತ್ತು ಭತ್ತ ಮಾತ್ರವಲ್ಲ ಹೂವನ್ನು ಕೂಡ ಬೆಳೆಯಬಹುದು ಎಂದು ತೊರಿಸಿಕೊಟ್ಟಿದ್ದಾರೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದ ರೈತರು. ಆದರೆ ಕೊರೊನಾ ಪರಿಣಾಮ ರೈತರಿಗೆ ಹೂವಿನ ಬೆಳೆಯಲ್ಲಿ ನಷ್ಟವಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ನೇರಲೆಕೆರೆ ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ಕಳೆದೆರಡು ವರ್ಷಗಳಿಂದ ಹೂವನ್ನೇ ಬೆಳೆದು ಜೀವನ ನಡೆಸುತ್ತಿದ್ದರು. ಹೇಗೋ ಸಾಲ ಮಾಡಿ ಸುಮಾರು 20 ಎಕರೆ ಪ್ರದೇಶದಲ್ಲಿ ಕನಕಾಂಬರ ಹೂ ಬೆಳೆದಿದ್ದರು. ಆದರೆ ಕಳೆದ ವರ್ಷ ಇನ್ನೇನು ಬೆಳೆದ ಹೂವು ಕೈಗೆ ಬಂದು ಸಾಲ ತೀರಿಸಬೇಕು ಎನ್ನುವಷ್ಟರಲ್ಲಿ ಕೊರೊನಾ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು.
ಇನ್ನೂ ಈ ಬಾರಿಯೂ ಎಲ್ಲಾ ಶುಭ ಕಾರ್ಯಗಳು ಪ್ರಾರಂಭವಾಗುತ್ತಿದ್ದಂತೆ ಒಂದೊಂದು ಕುಟುಂಬದವರು ಸುಮಾರು 2 ಲಕ್ಷ ರೂ. ಸಾಲ ಮಾಡಿ ಹೂವು ಬೆಳೆದಿದ್ದರು. ಕೊರೊನಾ ಎರಡನೇ ಅಲೆಯಿಂದ ಇದೀಗ ರೈತರು ಬೆಳೆದ ಹೂವುಗಳನ್ನು ಕೊಳ್ಳುವವರಿಲ್ಲದೆ ತಿಪ್ಪೆಗೆ ಎಸೆಯುತ್ತಿದ್ದಾರೆ. ನಿತ್ಯ 25 ಸಾವಿರದಷ್ಟು ಆದಾಯ ಕೊಡುತ್ತಿದ್ದ ಹೂಗಳು ಬಾಡುತ್ತಿವೆ. ಕೂಲಿ ಕಾರ್ಮಿಕರ ಖರ್ಚು ವೆಚ್ಚ ಕಳೆದು 10 ಸಾವಿರದಷ್ಟು ಉಳಿಕೆ ಆಗುತ್ತಿದ್ದ ಅನ್ನದಾತ ಸದ್ಯ ದಿಕ್ಕು ತೋಚದೆ ಕಂಗಾಲಾಗಿದ್ದಾನೆ.
ಕೋವಿಡ್ ಪರಿಣಾಮ ದೇಶಾದ್ಯಂತ ಲಾಕ್‌ಡೌನ್‌ನಿಂದಾಗಿ ದೇವಾಲಯ, ಮದುವೆ, ಶುಭ ಕಾರ್ಯಗಳಿಗೆ ಬಳಕೆ ಆಗುತ್ತಿದ್ದ ಕನಕಾಂಬರ ಹೂ ಹೆಚ್ಚಾಗಿ ಮೈಸೂರು, ಮಂಡ್ಯ ಹಾಗೂ ಬೆಂಗಳೂರಿಗೆ ರಫ್ತು ಆಗುತ್ತಿತ್ತು. ಹೂ ಬೆಳೆದರೆ ಬದುಕು ಕಟ್ಟಿಕೊಳ್ಳಬಹುದು ಎನ್ನುವಷ್ಟರಲ್ಲಿ ಪುನಃ ಕೋವಿಡ್ ಶಾಕ್ ನೀಡಿ ಲಾಕ್‌ಡೌನ್ ಜಾರಿಗೆ ಬಂದಿದೆ. ಯಾವ ಶುಭಕಾರ್ಯಗಳು ಕೂಡ ನಡೆಯದೇ ಇದ್ದುದ್ದರಿಂದ ಅನ್ನದಾತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಅಳಲು ತೋಡಿಕೊಂಡಿದ್ದೇವೆ.
ಇದನ್ನೂ ಓದಿ: ಲಾಕ್‌ಡೌನ್ ನಡುವೆಯೂ ಹೋಟೆಲ್ನಲ್ಲಿ ಜೂಜಾಟ: 27 ಜನರ ಬಂಧನ
ನಿನ್ನೆ ಹಣ್ಣು, ತರಕಾರಿ, ಹೂವು ಬೆಳೆಗಾರರಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂಪಾಯಿಯಂತೆ ಸಹಾಯಧನ ಘೋಷಿಸಿದ್ದು, ಇದಕ್ಕೆ 70 ಕೋಟಿ ರೂ. ಮೀಸಲಿಡಲಾಗಿದೆ. ಆದ್ರೆ ಹೂಡಿದ ಬಂಡವಾಳ ನಮ್ಮ ಕೈ ಸೇರುವುದಿಲ್ಲ ಎನ್ನುವ ಆತಂಕ ರೈತರಲ್ಲಿದೆ. ಇನ್ನೂ ಕಳೆದ ಬಾರಿ ಘೋಷಿಸಿದ ಪರಿಹಾರ ಕೂಡ ನಮ್ಮ ಕೈಸೇರಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಈ ಬಾರಿ ಸಹಾಯಧನ ರೈತರ ಕೈ ಸೇರಿದರೆ ಒಂದಿಷ್ಟು ಸಮಸ್ಯೆಯಾದರೂ ಪರಿಹಾರವಾದೀತು.