ಮಂಡ್ಯ: ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಂಡ್ಯ ತಾಲೂಕಿನ ಇಂಡವಾಳು ಬಳಿಯ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಬೆಂಗಳೂರು ಮೂಲದ ದಂಪತಿ ಎನ್ನಲಾಗಿದೆ. ಆದರೆ ಹೆಸರು ವಿವರ ಇನ್ನೂ ತಿಳಿದು ಬಂದಿಲ್ಲ.
ಮೈಸೂರು ಕಡೆಯಿಂದ ಬೆಂಗಳೂರಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇಂಡವಾಳು ಬಳಿ ರಸ್ತೆ ಕಾಮಗಾರಿ ಸ್ಥಳದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವಗಳನ್ನು ಮಿಮ್ಸ್ ಶವಾಗಾರಕ್ಕೆ ಸಾಗಿಸಿದರು. ಈ ಸಂಬಂಧ ಸೆಂಟ್ರಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ.
ಇದನ್ನೂ ಓದಿ: ಬೆಂಗಳೂರು: ಆಟೋಗೆ ಬೈಕ್ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ- ಸಿಸಿಟಿವಿ ದೃಶ್ಯ
ಮೂವರ ದುರ್ಮರಣ: ಇನ್ನು ಮಥುರಾ ಜಿಲ್ಲೆಯ ಸುರಿರ್ ಪೊಲೀಸ್ ಠಾಣಾ ವ್ಯಾಪ್ತಿಯ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಭಾನುವಾರ ತಡರಾತ್ರಿ ದೆಹಲಿಯಿಂದ ಬಿಹಾರಕ್ಕೆ ತೆರಳುತ್ತಿದ್ದ ಬಸ್ ಅತಿವೇಗದಲ್ಲಿದ್ದ ಕಾರಣ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅವಘಡದಲ್ಲಿ 3 ಮಂದಿ ಸಾವನ್ನಪ್ಪಿದ್ದಾರೆ. ಜತೆಗೆ ಬಸ್ನಲ್ಲಿದ್ದ 22 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಯಮುನಾ ಎಕ್ಸ್‌ಪ್ರೆಸ್ ವೇ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆ ರವಾನಿಸಲಾಗಿದೆ.
ಮೃತರ ಗುರುತು ಪತ್ತೆಯಾಗಿಲ್ಲ ಎಂದು ಮಥುರಾ ಜಿಲ್ಲಾಧಿಕಾರಿ ಪುಲ್ಕಿತ್ ಖರೆ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪ್ರಯಾಣಿಕರನ್ನು ಆಗ್ರಾ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡ ಹತ್ತು ವರ್ಷದ ಅರುಣ್, 25 ವರ್ಷದ ಶಿವಾಜಿರಾವ್, 21 ವರ್ಷದ ವೀರೇಂದ್ರ ರಾಮ್, 55 ವರ್ಷದ ಲೀಲಾವತಿ, ರಾಮ್ ಚಂದ್ರ, ಆದಿತ್ಯ ಕುಮಾರ್ (6 ವರ್ಷ) ಅವರನ್ನು ಆಗ್ರಾಕ್ಕೆ ರವಾನಿಸಲಾಗಿದೆ. ಕೆಲ ಪ್ರಯಾಣಿಕರ ಸ್ಥಿತಿ ಗಂಭೀರವಾಗಿದ್ದು, ಇನ್ನೂ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿ ಆದ ಬಸ್.. ಮೂವರು ಪ್ರಯಾಣಿಕರ ದುರ್ಮರಣ