ಮಂಡ್ಯ: ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಓಂ ಶಕ್ತಿಗೆ ಹೋಗಿ ಬಂದವರಿಂದಲೇ ಮಕ್ಕಳಿಗೆ ಸೋಂಕು ಹೆಚ್ಚಾಗಿದೆ. ಜಿಲ್ಲೆಯಲ್ಲಿ ಈವರೆಗೆ 60 ಶಾಲಾ ಮಕ್ಕಳಿಗೆ ಕೊರೊನಾ ಬಂದಿದ್ದು, ಇನ್ನೂ ಹಲವು ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ರಿಪೋರ್ಟ್‌ಗೆ ಕಾಯುತ್ತಿದ್ದೇವೆ ಎಂದು ಡಿಡಿಪಿಐ ಜವರೇಗೌಡ ಹೇಳಿದ್ದಾರೆ.
ಬೆಳಗೊಳ ಹೈಸ್ಕೂಲ್ನಲ್ಲಿ 13, ನೆರಳಕರೆ ಶಾಲೆಯ 1, ಅರಕೆರೆ ಶಾಲೆಯ 1 ಹಾಗೂ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಹಾಸ್ಟೆಲ್ನ 12 ಹಾಗೂ ಮಳವಳ್ಳಿ ತಾಲೂಕಿನ ಶಿವನಸಮುದ್ರದಲ್ಲಿ ಓರ್ವ ವಿದ್ಯಾರ್ಥಿಗೆ ಸೋಂಕು ಕಾಣಿಸಿಕೊಂಡಿದ್ದು, ಕಡ್ಡಾಯವಾಗಿ SOP ಪಾಲನೆ ಮಾಡಲು ಕ್ಷೇತ್ರ ಶಿಕ್ಷಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭೌತಿಕ ತರಗತಿಗಳು ನಡೆಯುತ್ತಿವೆ. ಆರೋಗ್ಯ ಇಲಾಖೆಗೆ ಸಹಕಾರ ಕೊಟ್ಟಿದ್ದೇವೆ. ರ್ಯಾಂಡಮ್ ಟೆಸ್ಟ್ ವೇಳೆ ಪ್ರಕರಣಗಳು ಪತ್ತೆಯಾಗಿವೆ. ಮಕ್ಕಳಲ್ಲಿ ಸೋಂಕು ಪತ್ತೆ ಹಿನ್ನೆಲೆಯಲ್ಲಿ ಪೋಷಕರಿಗೂ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ, ಈ ಬಗ್ಗೆ ಶಾಲೆಯ ಶಿಕ್ಷಕರು ಎಚ್ಚರಿಕೆ ವಹಿಸಬೇಕು. ಮಕ್ಕಳಲ್ಲಿ ಸೋಂಕು ಹೆಚ್ಚಾದರೆ ಶಾಲೆ ಮುಚ್ಚುವುದರ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸುತ್ತದೆ. ಶಾಲೆಗಳಲ್ಲಿ ಕಡ್ಡಾಯ ಕೋವಿಡ್ ನಿಯಮಕ್ಕೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಕಳೆದ ಬಾರಿಯಂತೆ ಈ ಬಾರಿಯೂ ಮಂಡ್ಯ ಜಿಲ್ಲೆಗೆ ಹೊರ ರಾಜ್ಯದಿಂದ ಬಂದವರಿಂದಲೇ ಕೊರೊನಾ ಆತಂಕ ಹೆಚ್ಚಾಗಿದೆ. ಮೊದಲನೇ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಜಿಲ್ಲೆಗೆ ಹೊರರಾಜ್ಯಗಳಿಂದ ಬಂದಂತಹ ಜನರಿಂದಲೇ ಕೊರೊನಾ ಸಂಖ್ಯೆ ಜಾಸ್ತಿಯಾಗಿತ್ತು. ಮುಂಬೈ, ಗೋವಾ, ಕೇರಳ, ತಮಿಳುನಾಡುಗಳಿಂದ ಹಲವಾರು ಜನ ನಾನಾ ಕಾರಣಗಳಿಗೆ ಮಂಡ್ಯ ಜಿಲ್ಲೆಗೆ ಬಂದಿದ್ದರು. ಈ ಬಾರಿ ಸಹ ತಮಿಳುನಾಡಿನಿಂದ ಬಂದಿರುವ ಅನೇಕರಿಂದ ಕೊರೊನಾ ಸಂಖ್ಯೆ ದಿನೇ ದಿನೇ ಜಾಸ್ತಿಯಾಗುತ್ತಿದೆ ಎಂದು ಡಿಎಚ್ಒ ಧನಂಜಯ್ ವಿವರಿಸಿದರು.
ಹೊರ ರಾಜ್ಯಕ್ಕೆ ಹೋಗಿದ್ದ 5,300 ಜನರಲ್ಲಿ 320 ಜನಕ್ಕೆ ಪಾಸಿಟಿವ್ ಬಂದಿದೆ. ಎಲ್ಲರಿಗೂ ಕೊವಿಡ್ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮತ್ತೆ 7 ದಿನ ಬಳಿಕ ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಬಿಡಲಾಗುತ್ತದೆ. ಪ್ರತಿದಿನ ಕೊವಿಡ್ ಟೆಸ್ಟ್ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹೆಚ್ಚು ಪ್ರಕರಣ ದಾಖಲಾಗುತ್ತಿವೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಶೇ 96 ಮೊದಲ ಡೋಸ್ ವ್ಯಾಕ್ಸಿನೇಷನ್, 90% 2 ನೇ ಡೋಸ್ ವ್ಯಾಕ್ಸಿನೇಷನ್ ಆಗಿದೆ. ವ್ಯಾಕ್ಸಿನ್ ಪಡೆಯದೇ ಇರುವವರಲ್ಲಿ ಕೋವಿಡ್ ಕಾಣಿಸಿ ಕೊಳ್ಳುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಲಸಿಕೆ ಪಡೆದುಕೊಳ್ಳಿ ಎಂದು ಮನವಿ ಮಾಡಿದರು.
ಹೊರ ರಾಜ್ಯಕ್ಕೆ ಹೊಗಿದ್ದವರನ್ನ ಗುರುತಿಸಿ ಕ್ವಾರಂಟೈನ್ ಮಾಡಲಾಗುತ್ತಿದೆ. ಮಕ್ಕಳಿಗೆ ಮೊದಲ ಅಲೆಯಲ್ಲು ಪಾಸಿಟಿವ್ ಬಂದಿದೆ. ಅದ್ರೆ ಮಕ್ಕಳಲ್ಲಿ ತೀವ್ರತರವಾದ ಪರಿಣಾಮ ಇಲ್ಲ. ಪಾಸಿಟಿವ್ ಬಂದಿದ್ದ, ಎಲ್ಲರೂ ಸಹ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಶಾಲೆಗಳಿಗೆ ನಮ್ಮ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಸರ್ಕಾರದಿಂದ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಶಾಲೆಗಳಲ್ಲಿ ಪಾಲನೆ ಮಾಡಬೇಕು. ಜಿಲ್ಲೆಯಲ್ಲಿ 5.5% ಪಾಸಿಟಿವಿಟಿ ರೇಟ್ ಇದೆ. ಮುಂದಿನ ದಿನಗಳಲ್ಲಿ ಹೆಚ್ಚು ಟೆಸ್ಟ್ ಮಾಡಿ ಕೊರೊನಾ ನಿಯಂತ್ರಣ ಮಾಡಲು ಯೋಜನೆ ರೂಪಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.