ಮಂಡ್ಯ: ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತ ಯೋಜನೆಯಡಿ ಜಿಲ್ಲೆಯ ಆಲೆಮನೆಗಳ ಪುನಶ್ಚೇತನಕ್ಕೆ ಒತ್ತು ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಜಿಲ್ಲೆ ಒಂದು ಉತ್ಪನ್ನದಡಿ ಆಲೆಮನೆಗಳ ಮೇಲ್ದರ್ಜೆಗೇರಿಸುವುದು, ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಲಾಗುವುದು. ಬೆಲ್ಲಕ್ಕೆ ಬ್ರ್ಯಾಂಡ್ ರೂಪ ನೀಡಿ ರಫ್ತಿಗೆ ಉತ್ತೇಜನ ನೀಡುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಆಲೆಮನೆ ಮಾಲೀಕರು ಎದುರಿಸುತ್ತಿರುವ ಸಮಸ್ಯೆ ಸೇರಿದಂತೆ ಯೋಜನೆ ಜಾರಿಗೆ ಅಡ್ಡಿಯಾಗಿರುವ ಸವಾಲುಗಳ ಅಧ್ಯಯನ ಮಾಡಲಾಗುತ್ತದೆ. ಈ ಬಗ್ಗೆ ಫೆ.6ರೊಳಗೆ ವರದಿ ಪಡೆದು ಸಚಿವ ಸಂಪುಟದ ಅನುಮೋದನೆಯೊಂದಿಗೆ ಬಜೆಟ್ ಘೋಷಣೆಗೆ ಸೇರಿಸಲಾಗುವುದು.
ರೈತರು ಬೆಲ್ಲ ತಯಾರಿಕೆಗೆ ಉತ್ತಮ ತಂತ್ರಜ್ಞಾನ ಬಳಸಿ, ರಾಸಾಯನಿಕ ಮುಕ್ತ ಬೆಲ್ಲ ತಯಾರಿಕೆಗೆ ಸಹಕರಿಸಬೇಕು. ಈ ಸಂಬಂಧ ರೈತರಿಗೆ ತರಬೇತಿ ಮತ್ತು ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಸರ್ಕಾರದ ಹಾಗೂ ಸಹಕಾರಿ ಬ್ಯಾಂಕ್ಗಳಿಂದ ಅಲೆಮನೆಗಳಿಗೆ ಸಹಾಯಧನ, ಸಾಲ ವ್ಯವಸ್ಥೆ ಕಲ್ಪಿಸುವಲ್ಲಿ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದರು.