ಮಂಡ್ಯ: ಕಾಂಗ್ರೆಸ್ ಪಕ್ಷ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಗಣಿಗ ಪಿ.ರವಿಕುಮಾರ್ ಹಾಗೂ ಕೆ.ಆರ್. ಪೇಟೆಯಿಂದ ಬಿ.ಎಲ್.ದೇವರಾಜು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಮದ್ದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಇಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಕದಲೂರು ಉದಯ್ ಹಾಗೂ ಗುರುಚರಣ್ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಯಾರಿಗೆ ಕಾಂಗ್ರೆಸ್ ಟಿಕೆಟ್ ಒಲಿಯುತ್ತೆ ಅನ್ನುವುದು ತೀವ್ರ ಕುತೂಹಲ ಮೂಡಿಸಿದೆ.
ಮಂಡ್ಯ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಎಲ್ಲ ಐದು ಕ್ಷೇತ್ರಗಳ ಟಿಕೆಟ್ ಘೋಷಣೆಯಾಗಿದ್ದು, ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು 16 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಇವರ ಪೈಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಗಣಿಗ ರವಿಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಮತ್ತೊಂದು ಅವಕಾಶ ನೀಡಿದೆ.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿ.ಎಲ್.ದೇವರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಮತ್ತೋರ್ವ ಪ್ರಬಲ ಆಕಾಂಕ್ಷಿ ವಿಜಯ್ ರಾಮೇಗೌಡ ಅವರಿಗೆ ನಿರಾಸೆಯಾಗಿದೆ. ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಪಕ್ಷ ಸೇರಿದ್ದ ಬಿ.ಎಲ್.ದೇವರಾಜುಗೆ ಟಿಕೆಟ್ ನೀಡಿ ಅನುಕಂಪದ ಲಾಭ ಪಡೆಯಲು ಮುಂದಾಗಿದೆ.
ಯಾರಿಗೆಲ್ಲ ಸಿಕ್ಕಿದೆ ಟಿಕೆಟ್: ತೀರ್ಥಹಳ್ಳಿಯಲ್ಲಿ ಫೈಟ್ನಲ್ಲಿದ್ದ ಟಿಕೆಟ್ ಕೊನೆಗೂ ಮಂಜುನಾಥ್ಗೌಡರ ಬದಲು ಕಿಮ್ಮನೆ ರತ್ನಾಕರ್ ರ ಪಾಲಿಗೆ ಒಲಿದು ಬಂದಿದೆ.ಇನ್ನು ನಿರಾಸೆಗೊಂಡ ಆಕಾಂಕ್ಷಿ ಮಂಜುನಾಥ್ ಅವರಿಗೆ ಎಂಎಲ್ಸಿ ಸ್ಥಾನದ ಭರವಸೆ ಸಿಕ್ಕಿದೆ. ಇನ್ನು ಡಿಕೆ ಶಿವಕುಮಾರ್ ಆಪ್ತನಾಗಿದ್ದ ಕೆಎಸ್ ಆನಂದ್ಗೆ ಕಡೂರು ಟಿಕೆಟ್ ದೊರಕಿದೆ. ಹಾಗೆ ಯಶವಂತಪುರಕ್ಕೆ ಎಸ್ ಬಾಲರಾಜಗೌಡರವರು ಟಿಕೆಟ್ ಪಡೆದುಕೊಂಡಿದ್ದಾರೆ. ಬಾಬುರಾವ್ ಚಿಂಚನಸೂರ್ಗೆ ಗುರುಮಠಕ್ಕಲ್ನಿಂದ, ಧಾರವಾಡದಿಂದ ವಿನಯ್ ಕುಲಕರ್ಣಿ,ಸಂತೋಷ್ ಲಾಡ್ಗೆ ಕಲಘಟಗಿಯಲ್ಲಿ ಕಣಕ್ಕಿಳಿಯಲು ಟಿಕೆಟ್ ಸಿಕ್ಕಿದೆ.
ಹಾಗೆ ಇಂದಿನ 2 ನೇ ಪಟ್ಟಿಯಲ್ಲಿ ನೋಡುವುದಾದರೆ ಹೆಚ್ಚಿನಿದಾಗಿ ವಿರೊಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆಪ್ತರಿಗೆ ಟಿಕೆಟ್ ದೊರಕಿದೆ. ಒಟ್ಟಾರೆ ಕಿಮ್ಮನೆ ರತ್ನಾಕರ್,ಆರ್.ಬಿ.ತಿಮ್ಮಾಪೂರ ಹೆಚ್.ಆಂಜನೇಯ, ಜೆ.ಟಿ.ಪಾಟೀಲ್, ಹೆಚ್.ವೈ.ಮೇಟಿ, ಎಂ.ವೈ.ಪಾಟೀಲ್, ಇಕ್ಬಾಲ್ ಅನ್ಸಾರಿ, ಬಿ.ಆರ್.ಯಾವಗಲ್, ವಿಜಯ್ ಸಿಂಗ್, ವಿನಯ್ ಕುಲಕರ್ಣಿ, ಸಂತೋಷ್ ಲಾಡ್, ಆನಂದ್ ಎಸ್., ದರ್ಶನ್ ಪುಟ್ಟಣ್ಣಯ್ಯ, ಬಿ.ಎಲ್.ದೇವರಾಜ್, ಮಂಥರ್ ಗೌಡ, ಸಿದ್ದೇಗೌಡಗೆ ಟಿಕೆಟ್ ದೊರಕಿಸಿ ಕೊಡುವಲ್ಲಿ ಸಿದ್ದರಾಮಯ್ಯ ಸಕ್ಸಸ್ ಆಗಿದ್ದಾರೆ.
ಇನ್ನು ಉಳಿದಿರುವ ಕ್ಷೇತ್ರಗಳಲ್ಲಿ ಎಲ್ಲವೂ ಕುತೂಹಲ ಹುಟ್ಟಿಸಿರುವ ಕ್ಷೇತ್ರಗಳಾಗಿವೆ. ಚನ್ನಪಟ್ಟಣ, ಮದ್ದೂರು, ತರಿಕೆರೆ, ಚಿಕ್ಕಮಗಳೂರು, ಶಿಗ್ಗಾಂವಿ, ಮೂಡಿಗೆರೆ, ಚಿಕ್ಕಪೇಟೆ, ಕೆಆರ್ ಪುರಂ, ಬೊಮ್ಮನಹಳ್ಳಿ, ದಾಸರಹಳ್ಳಿ, ಸಿವಿ ರಾಮನ್ ನಗರ, ಪುಲಿಕೇಶಿ ನಗರ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿಗೆ ಇನ್ನು ಟಿಕೆಟ್ ಘೋಷನೆಯಾಗಬೇಕಷ್ಟೆ. ಮಂಗಳೂರು ಉತ್ತರ, ಪುತ್ತೂರು, ಕುಮಟಾ, ಭಟ್ಕಳ, ಕೋಲಾರ, ಕಾರ್ಕಳ, ಶಿಕಾರಿಪುರ, ಶಿವಮೊಗ್ಗ ನಗರ ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಯಾವ ನಿರ್ಧಾರ ಕೈಗೊಳ್ಳಲಿದೆ ನೋಡಬೇಕಿದೆ.
ಇದನ್ನೂ ಓದಿ; ಕಾಂಗ್ರೆಸ್ನಿಂದ 42 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ.. ಯಾವ ಕ್ಷೇತ್ರಕ್ಕೆ ಯಾರು ನೋಡಿ