ಮಂಡ್ಯ: ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸ್ವಾಗತ ಕೋರುವ ಹಾಗೂ ಅಲ್ಲಿಂದ ತೆರಳುವ ಸಂದರ್ಭದಲ್ಲಿ ಕ್ಷೇತ್ರದ ಜೆಡಿಎಸ್ ಶಾಸಕ ಕೆ.ಸುರೇಶ್ಗೌಡ ಅವರು ಎರಡು ಬಾರಿ ಬಿಎಸ್ವೈ ಕಾಲಿಗೆ ನಮಸ್ಕರಿಸಿದ್ದು, ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಸುರೇಶ್ಗೌಡ ಅವರು, ಯಡಿಯೂರಪ್ಪ ಹಿರಿಯರು, ತಂದೆ ಸಮಾನ. ಹೀಗಾಗಿ ಆಶೀರ್ವಾದ ಪಡೆದಿದ್ದೇನೆ. ಅವರ ಜಾಗದಲ್ಲಿ ಸಿದ್ದರಾಮಯ್ಯ ಬಂದಿದ್ದರೂ, ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದೆ ಎಂದು ಸ್ಪಷ್ಟಪಡಿಸಿದರು.
ನಾನು ಪಕ್ಷ ಬಿಟ್ಟು ಹೋಗುವ ಮಾತೇ ಇಲ್ಲ. ಈ ಹಿಂದೆ ಬಿಜೆಪಿಯಿಂದ ನನಗೆ ಆಫರ್ ಬಂದಿತ್ತು ಎಂದಿದ್ದೆ. ಈಗ ಅವರಿಗೆ ಯಾರ ಅವಶ್ಯಕತೆಯೂ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಯಕ್ತಿಕವಾಗಿ ನಾರಾಯಣಗೌಡ ನಾನು ಸ್ನೇಹಿತರು. ಉಪಚುನಾವಣೆಯಲ್ಲಿ ಅವರ ವಿರುದ್ಧ ಪ್ರಚಾರ ನಡೆಸಿದ್ದೇನೆ. ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಎರಡನೇ ಸ್ಥಾನಕ್ಕೆ ಬಂದಿದೆ. ಕಾಂಗ್ರೆಸ್ ಸ್ಥಿತಿ ಅಧೋಗತಿಯಾಗಿದೆ. ಜೆಡಿಎಸ್ನಲ್ಲಿ ಯಾವುದೇ ನೋವಿಲ್ಲ. ಪಕ್ಷ ಬಿಡುವ ಮಾತಿಲ್ಲ. ಅವೆಲ್ಲ ಊಹಾಪೋಹಗಳು ಎಂದು ಆರೋಪಗಳಿಗೆ ಅಲ್ಲಗಳೆದರು.
ಉಪಚುನಾವಣೆ ನಂತರ ಬಿಎಸ್ವೈ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಕಾಲಭೈರವನ ಆಶೀರ್ವಾದ ಪಡೆದುಕೊಂಡರು. ಪೂಜೆ ನಂತರ ಆದಿ ಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಶಿಕ್ಷಣ ಸಂಸ್ಥೆಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಅಲ್ಲದೆ, ಕ್ರೀಡಾಳುಗಳಿಗೆ ಶುಭಕೋರಿದರು. ಮಠದ ನಿರ್ಮಲಾನಂದ ಸ್ವಾಮೀಜಿ, ಕಂದಾಯ ಸಚಿವ ಅಶೋಕ್ ಇದ್ದರು.