ಮಂಡ್ಯ: ಅತಿ ಹೆಚ್ಚು ಮಳೆಯಿಂದ ಟಿ. ಕೆ ಹಳ್ಳಿಯ ಪಂಪ್ ಹೌಸ್ ಬಳಿಯ ಭೀಮೇಶ್ವರ ನದಿ ಹಾಗೂ ಕೆರೆ ತುಂಬಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎರಡು ಪಂಪ್ ಹೌಸ್ಗೆ ನುಗ್ಗಿ ಬಹಳ ಹಾನಿಯಾಗಿದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ತಿಳಿಸಿದರು.
ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಮಳೆ ನೀರು ತುಂಬಿ ಹಾನಿಯಾಗಿರುವ ಹಿನ್ನೆಲೆ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಭೀಮೇಶ್ವರ ನದಿ ಉಕ್ಕಿ ಹರಿದಿದೆ. ನದಿ ನೀರು ಹೆಚ್ಚಾಗಿ ನೀರು ಸರಬರಾಜು ಘಟಕಕ್ಕೆ ನುಗ್ಗಿ ಬಹಳ ಹಾನಿಯಾಗಿದೆ. 75 ವರ್ಷದ ಬಳಿಕ ಈ ನದಿಯಲ್ಲಿ ಇಷ್ಟು ಪ್ರಮಾಣದ ನೀರು ಬಂದಿದೆ. 5 ಘಟಕಗಳ ಪೈಕಿ 2 ಪಂಪ್ ಹೌಸ್ಗಳಿಗೆ ನೀರು ನುಗ್ಗಿದೆ ಎಂದರು.
ನಿರಂತರವಾಗಿ ನೀರು ಸರಬರಾಜಾಗುತ್ತಿದೆ : 1,450 ಎಂ.ಎಲ್.ಡಿ ಸಾಮರ್ಥ್ಯದ ಪಂಪ್ ಹೌಸ್‌ಗಳಿದ್ದು, 550 ಮತ್ತು 350 ಎಂ.ಎಲ್.ಡಿ ಸಾಮರ್ಥ್ಯದ ಘಟಕಗಳಿವೆ. 550 ಎಂ.ಎಲ್.ಡಿ ಸಾಮರ್ಥ್ಯದ ಪಂಪ್ ಹೌಸ್ಗಳು ಈಗಾಗಲೇ ಕೆಲಸ ಮಾಡುತ್ತಿದ್ದು, ನೀರು ಬೆಂಗಳೂರಿಗೆ ನಿರಂತರವಾಗಿ ಸರಬರಾಜು ಆಗುತ್ತಿದೆ ಎಂದು ಹೇಳಿದರು.
ನೀರು ತುಂಬಿದ ಎರಡು ಪಂಪ್ ಹೌಸ್ಗಳನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಸ್ಟೇಜ್ 4 ಪಂಪ್ ಹೌಸ್ನಲ್ಲಿ 12 ಅಡಿ ನೀರು ಹೊರ ತೆಗೆಯಲಾಗಿದೆ. ಇನ್ನೂ 11 ಅಡಿ ನೀರು ತೆಗೆಯಬೇಕು. ಮಧ್ಯರಾತ್ರಿ ಅಥವಾ ನಾಳೆ ಬೆಳಗ್ಗೆ ಒಳಗೆ ಈ ಕಾರ್ಯ ಮುಗಿಯಲಿದೆ ಎಂದರು.
ಕಾಂಕ್ರೀಟ್ ತಡೆಗೋಡೆ ಮಾಡಲಾಗುವುದು: ಯಂತ್ರೋಪಕರಣಗಳನ್ನು ಡ್ರೈ ಮಾಡಿದ ಬಳಿಕ 350 ಎಂಎಲ್ಡಿ ನೀರನ್ನು ಸರಬರಾಜು ಮಾಡಲಾಗುತ್ತದೆ. ಇದರಿಂದ ಮತ್ತಷ್ಟು ನೀರನ್ನು ಬೆಂಗಳೂರಿಗೆ ಒದಗಿಸಲು ಸಾಧ್ಯವಾಗುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಒದಗಿಸಲು ಪಂಪ್ ಹೌಸ್ ಸುತ್ತಾ ಕಾಂಕ್ರೀಟ್ ತಡೆಗೋಡೆ ಮಾಡಲಾಗುವುದು ಎಂದು ಹೇಳಿದರು.
ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ: ಮಳೆ ನಿರಂತರವಾಗಿ ಸುರಿಯುತ್ತಿದೆ. ರಾಜ್ಯದ ಎಲ್ಲ ಕೆರೆ, ಕಟ್ಟೆಗಳು ಭರ್ತಿಯಾಗಿವೆ. ಮಳೆನೀರು, ಕೆರೆನೀರು ಒಟ್ಟಾಗಿ ಹರಿದು ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಜಾಗ್ರತೆ ವಹಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು. ಇದಕ್ಕೂ ಮುನ್ನ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ಓದಿ: ಐಟಿ ಬಿಟಿ ಕಂಪನಿಗಳಿಗೆ ಮೂಲ ಸೌಕರ್ಯ ಒದಗಿಸಿ: ವಿಪಕ್ಷ ನಾಯಕ ಸಿದ್ದರಾಮಯ್ಯ