ಮಂಡ್ಯ: ಸಂಬಂಧಿಕರು ರಾತ್ರೋರಾತ್ರಿ ಬಾಲ್ಯ ವಿವಾಹಕ್ಕೆ ಯತ್ನಿಸಿದ್ದು, ಬಾಲಕಿಯ ತಂದೆ ಸಹಾಯದಿಂದ ಪೊಲೀಸರು ಮತ್ತು ಅಧಿಕಾರಿಗಳು ಮದುವೆ ತಡೆದಿರುವ ಘಟನೆ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕೊರಟೀಕೆರೆ ಬಳಿಯ ಕನ್ನೇಶ್ವರ ದೇವಾಲಯ ಬಳಿ ನಡೆದಿದೆ.
ಕೋಣನಕೊಪ್ಪಲು ಗ್ರಾಮದ 16 ವರ್ಷದ ಬಾಲಕಿಗೆ 36 ವರ್ಷದ ಕೊಪ್ಪಲು ಗ್ರಾಮದ ವರ ಮಹೇಶ್ ಜೊತೆಗೆ ಮದುವೆಗೆ ಸಿದ್ಧತೆ ನಡೆದಿತ್ತು. ಕುಟುಂಬದವರು ಬೆಳಿಗ್ಗೆ 3 ಗಂಟೆಗೆ ಕನ್ನೇಶ್ವರ ದೇವಾಲಯದಲ್ಲಿ ವಿವಾಹ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಆದ್ರೆ ಮಗಳಿಗೆ ಬಾಲ್ಯ ವಿವಾಹ ಮಾಡಲು ತಂದೆಗೆ ಇಷ್ಟವಿರಲಿಲ್ಲ. ತಂದೆಯ ವಿರೋಧದ ನಡುವೆಯೂ ಕುಟುಂಬದಲ್ಲಿ ಬಾಲ್ಯ ವಿವಾಹ ಕಾರ್ಯಕ್ರಮ ಸಾಗುತ್ತಿದ್ದವು.
ಇದರಿಂದ ಬೇಸರಗೊಂಡ ಬಾಲಕಿ ತಂದೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬರುವಷ್ಟರಲ್ಲಿ ಕನ್ನೇಶ್ವರ ದೇವಾಲಯದಿಂದ ವಧು, ವರನ ಕಡೆಯವರು ಕಾಲ್ಕಿತ್ತಿದ್ದರು. ನಂತರ ಚಿಕ್ಕೋಸಹಳ್ಳಿಯ ದೊಡ್ಡಕೇರಮ್ಮ ದೇವಸ್ಥಾನದಲ್ಲಿ ವಿವಾಹಕ್ಕೆ ಯತ್ನ ಮಾಡಿದ್ದರು. ಅಲ್ಲಿಯೂ ಸಹ ಪೊಲೀಸರು ಬರುವ ವಿಚಾರ ತಿಳಿದು ಎರಡು ಕುಟುಂಬಸ್ಥರು ಎಸ್ಕೇಪ್ ಆಗಿದ್ದರು.
ಸದ್ಯ ಕೆ.ಆರ್ ಪೇಟೆ ಪಟ್ಟಣ ಠಾಣಾ ಪೊಲೀಸರು ಅಜ್ಞಾತ ಸ್ಥಳದಲ್ಲಿದ್ದ ಬಾಲಕಿಯನ್ನ ರಕ್ಷಿಸಿ ಹಲವರನ್ನ ಬಂಧಿಸಿದ್ದಾರೆ. ಪರಾರಿಯಾಗಿರುವ ವರನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು, ಸದ್ಯ ಕೆ.ಆರ್.ಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.