ಮಂಡ್ಯ: ಬಿಜೆಪಿ ಜೊತೆ ಜೆಡಿಎಸ್ ಪಕ್ಷದವರು ಮಿಂಗಲ್ ಆಗಿದ್ದಾರೆ ಎಂಬುದಕ್ಕೆ ಮೈಸೂರು ಮೇಯರ್ ಸ್ಥಾನ ಬಿಜೆಪಿ ತೆಕ್ಕೆಗೆ ಸೇರಿರುವುದೇ ಸಾಕ್ಷಿ ಎಂದು ಮಾಜಿ ಸಚಿವ ಚೆಲುವರಾಯಸ್ವಾಮಿ ವ್ಯಂಗ್ಯವಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ಬಾರಿ ತೀರ್ಮಾನದಂತೆ ಜೆಡಿಎಸ್ ಪಕ್ಷದವರು ಮೈಸೂರು ಮೇಯರ್ ಸ್ಥಾನ ನಮಗೆ ಕೊಡಬೇಕಾಗಿತ್ತು. ಕಳೆದ ಬಾರಿ ತಂತ್ರಗಾರಿಕೆ ಮಾಡಿ ಅವರು ಪಡೆದುಕೊಂಡಿದ್ದರು. ಆದರೆ ಇಂದು ಅವರು ಗೈರಾಗುವ ಮೂಲಕ ಬಿಜೆಪಿ ಜೊತೆ ಜೆಡಿಎಸ್ ಮಿಂಗಲ್ ಆಗಿದೆ ಅನ್ನೋದು ಎದ್ದು ಕಾಣುತ್ತಿದೆ ಎಂದರು.
ಬಿಜೆಪಿಯವರು ಜೆಡಿಎಸ್ನ್ನು ಸರಿಯಾದ ಸಂದರ್ಭದಲ್ಲಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಸಂದರ್ಭ ಬಂದಾಗ ಜನ ತೀರ್ಮಾನ ಮಾಡುತ್ತಾರೆ ಎಂದು ಜೆಡಿಎಸ್ ಗೆ ತಿರುಗೇಟು ನೀಡಿದರು.
ಜಿಟಿಡಿ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ:
ಜಿಟಿ ದೇವೆಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಟಿಡಿ ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತ, ಪಕ್ಷದ ಜೊತೆ ಚರ್ಚೆ ಮಾಡಿದ್ದೇನೆ. ನಮ್ಮ ಪಕ್ಷದ ಸಿದ್ಧಾಂತದ ಪ್ರಕಾರ, ನಮ್ಮ ನಾಯಕರ ಜೊತೆ ಮಾತನಾಡಿ ಸೇರಿಕೊಳ್ಳಲು ಇಚ್ಛೆಪಟ್ಟರೆ ಖಂಡಿತ ಅವರಿಗೆ ಸ್ವಾಗತ. ಆದರೆ ಅವರು ಏನು ಬೇಡಿಕೆ ಇಟ್ಟಿದ್ದಾರೆ ಅಂತ ಗೊತ್ತಿಲ್ಲ ಎಂದು ತಿಳಿಸಿದರು.
ಆರಗ ಅವರು ಗೃಹ ಸಚಿವರಾಗಲು ಸೂಕ್ತರಲ್ಲ:
ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಮಾತನಾಡಿದ ಅವರು, ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿ ಮುಂದುವರೆಯಲು ಸೂಕ್ತರಲ್ಲ. ಗೃಹ ಸಚಿವರ ಹೇಳಿಕೆಯನ್ನು ಸಿಎಂ ಅವರೇ ಖಂಡಿಸಿದ್ದಾರೆ ಎಂದ ಅವರು, ತುಮಕೂರಿನಲ್ಲಿ ಸಹ ಘಟನೆ ನಡೆದು ನಮ್ಮ ಜೆಡಿಎಸ್ ಶಾಸಕರು ಪ್ರತಿಭಟನೆ ಮಾಡಿದ್ದಾರೆ. ಅದರ ಬಗ್ಗೆ ಯಾರೂ ಚರ್ಚೆ ಮಾಡಿಲ್ಲ ಎಂದು ಬೇಸರ ಹೊರಹಾಕಿದರು.
ಕಾನೂನು ಸುವ್ಯವಸ್ಥೆ ಇಲ್ಲ:
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಅನ್ನೋದು ಎದ್ದು ಕಾಣುತ್ತಿದೆ. ಪ್ರಜಾಪ್ರಭುತ್ವದಲ್ಲಿ ಹೆಣ್ಣು ಮಕ್ಕಳು ಹೊರಗೆ ಓಡಾಡಲಿ ಸ್ವತಂತ್ರ ಅಂತಾರೆ. ಆದರೆ ವಿವಿ ಆವರಣದಲ್ಲಿ 6 ಗಂಟೆ ಮೇಲೆ ಹೆಣ್ಣು ಮಕ್ಕಳು ಓಡಾಡಬೇಡಿ ಅಂತಾ ಆದೇಶ ಮಾಡಲಾಗುತ್ತಿದೆ. ಇದನ್ನು ಮಾಡೋಕೆ ಇವರೇ ಬೇಕಾ? ಎಂದು ಪ್ರಶ್ನೆ ಮಾಡಿದರು.
ಜಿಲ್ಲಾಡಳಿತ 100 ಪರ್ಸೆಂಟ್ ಮಲತಾಯಿ ಧೋರಣೆ ಮಾಡ್ತಿದೆ:
ಕೋವಿಡ್ ರೂಲ್ಸ್ ಬ್ರೇಕ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲಾಡಳಿತ 100 ಪರ್ಸೆಂಟ್ ಮಲತಾಯಿ ಧೋರಣೆ ಮಾಡುತ್ತಿದೆ. ಐಎಎಸ್ ಅಧಿಕಾರಿಯಾಗಿ ಜಿಲ್ಲಾಡಳಿತದ ಕೆಲಸ ಮಾಡುತ್ತಿಲ್ಲ. ಸಂಪೂರ್ಣವಾಗಿ ಸರ್ಕಾರದ ಪರ ಕೆಲಸ ಮಾಡುತ್ತಿದ್ದಾರೆ. ಕೊರೊನಾ ನಿಯಮ ಪಾಲನೆ ಮಾಡದಿರುವುದು ತಪ್ಪು. ಆದರೆ ಯಾರು ಕಡ್ಡಾಯವಾಗಿ ನಿಯಮ ಪಾಲನೆ ಮಾಡುತ್ತಿದ್ದಾರೆ? ಸಿಎಂ ಅವರು ನಿನ್ನೆ ಬಾಗಿನ ಅರ್ಪಿಸಿದ್ದಾರೆ. ಅಲ್ಲಿ ಎಷ್ಟು ಜನ ಸೇರಿದ್ದರು? ಕಾನೂನು ಮಾಡುವವರೇ ಕೊರೊನಾ ನಿಯಮ ಉಲ್ಲಂಘಿಸಿದರೆ, ಬೇರೆಯವರಿಗೆ ನಾವು ಹೇಗೆ ಹೇಳೋದು? ಎಂದು ಪ್ರಶ್ನೆ ಮಾಡಿದರು.
ಖುಷಿಗೋಸ್ಕರ ಕಾರ್ಯಕ್ರಮ ಮಾಡುತ್ತಿಲ್ಲ:
ನಾವು ಖುಷಿಗೋಸ್ಕರ ಕಾರ್ಯಕ್ರಮ ಮಾಡ್ತಿಲ್ಲ. ಕಾರ್ಮಿಕರ ಸೌಲಭ್ಯದ ಬಗ್ಗೆ ನೋಂದಣಿಗಾಗಿ ಮಾಡುತ್ತಿದ್ದೇವೆ. ಆದರೆ ಮೊನ್ನೆ ಬಿಜೆಪಿ ಅವರು ಕಾರ್ಯಕಾರಣಿ ಸಭೆ ಮಾಡಿದ್ದಾರೆ. ಅವರ ಬಗ್ಗೆ ಏನು ಹೇಳೋದು?. ಕೋವಿಡ್ 144 ಇದ್ದರೂ ಕಾರ್ಯಕ್ರಮ ನಡೆಯುತ್ತಿದೆ. ನಾವು ಸಂಪೂರ್ಣ ಸರ್ಕಾರ ಹಾಗೂ ಜಿಲ್ಲಾಡಳಿತದ ಆದೇಶ ಪಾಲನೆ ಮಾಡಲು ಸಿದ್ಧರಿದ್ದೇವೆ. ಸಂಪೂರ್ಣವಾಗಿ ಎಲ್ಲಾ ಸ್ಥಗಿತವಾದರೆ ನಮ್ಮ ಪಕ್ಷದಲ್ಲಿ ಕೂಡ ಕಾರ್ಯಕ್ರಮ ಮಾಡಲ್ಲ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಫ್ಐಆರ್ :
ಜಿಲ್ಲಾಡಳಿತವು ಮಲತಾಯಿ ಧೋರಣೆ ಮಾಡುತ್ತಿದೆ. ಸರ್ಕಾರ ಏನೇ ಕಾನೂನು ಮಾಡಿದರೂ, ಎಲ್ಲರಿಗೂ ಅನ್ವಯ ಇರುತ್ತದೆ. ಆದರೆ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಮಾತ್ರ ಅಡಚಣೆ ಮಾಡುತ್ತಾರೆ. ಅಲ್ಲದೇ ಎಫ್ಐಆರ್ ಹಾಕಲಾಗುತ್ತಿದೆ. ಎಷ್ಟು ದಿನ ಇದೇ ರೀತಿ ಮಾಡ್ತಾರೆ ಎಂದು ನಾವು ನೋಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಓದಿ: ಕಾಂಗ್ರೆಸ್ಗೆ ಮತ ಹಾಕಿದ್ರೆ ಬೆಳಗಾವಿ ಜನರಿಗೆ ಶೇ. 50ರಷ್ಟು ತೆರಿಗೆ ವಿನಾಯಿತಿ: ಡಿ.ಕೆ.ಶಿವಕುಮಾರ್