ಮಂಡ್ಯ : ವಿಶ್ವ ಪ್ರಸಿದ್ಧ ಮೇಲುಕೋಟೆ ವೈರಮುಡಿ ಉತ್ಸವ ಕಳೆದೆರಡೂ ವರ್ಷಗಳಿಂದ ಸರಳವಾಗಿ ನಡೆದಿತ್ತು. ಈ ಬಾರಿ ಮೇಲುಕೋಟೆಯ ಪುರಾಣ ಪ್ರಸಿದ್ಧ ಕಲ್ಯಾಣಿಯಲ್ಲಿ ವೈಭವದಿಂದ ಸಂಭ್ರಮ, ಸಡಗರದಿಂದ ತೆಪ್ಪೋತ್ಸವ ನಡೆಯಿತು. ವೈರಮುಡಿ ಉತ್ಸವದ ಇತಿಹಾಸದಲ್ಲೇ ವಿಶೇಷವಾಗಿ ಮೇಲುಕೋಟೆ ತೆಪ್ಪೋತ್ಸವ ಜರುಗಿತು.
ಜಿಲ್ಲೆಯ ವಿಶ್ವ ಪ್ರಸಿದ್ಧ ಮೇಲುಕೋಟೆ ವೈರಮುಡಿ ಉತ್ಸವ ಕಳೆದ ಎರಡೂ ವರ್ಷಗಳಿಂದ ಸರಳವಾಗಿ ಆಚರಣೆ ಮಾಡಲಾಗಿತ್ತು. ದೇವರ ದರ್ಶನ ಸಿಗದೆ ಭಕ್ತರಿಗೆ ನಿರಾಶೆಯಾಗಿತ್ತು. ಆದರೆ, ಈ ಬಾರಿ ಅದ್ದೂರಿಯಾಗಿ ವೈರಮುಡಿ ಉತ್ಸವ ಜರುಗಿತು.
ಇಂದು 9ನೇ ದಿನದಂದು ಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವ ಮೇಲುಕೋಟೆಯ ಕಲ್ಯಾಣಿಯಲ್ಲಿ ನಡೆಯಿತು. ಈ ಬಾರಿ ವೈರಮುಡಿ ತೆಪ್ಪೋತ್ಸವಕ್ಕೆ ಹೈಟೆಕ್ ವಿದ್ಯುತ್ ಸ್ಪರ್ಶ ನೀಡಲಾಗಿತ್ತು.
ರಾಜಮುಡಿ ಕಿರೀಟ ತೊಟ್ಟ ಚೆಲುವನಾರಾಯಣ ಸ್ವಾಮಿ ಸೇವೆ ನಡೆಯಿತು. ಇದೇ ಮೊದಲ ಬಾರಿಗೆ ಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವದಲ್ಲಿ ಗಂಗಾರತಿ ನಡೆಯಿತು. ಪಂಚ ಕಲ್ಯಾಣಿಗೆ ವಿಶೇಷ ಹಾಗೂ ಮನೋರಂಜನಾ ದೀಪಾಲಂಕಾರ ಮಾಡಲಾಗಿತ್ತು.
ಮೇಲುಕೋಟೆ ಕಲ್ಯಾಣಿಯಲ್ಲಿ ನಡೆದ ಚೆಲುವನಾರಾಯಣ ಸ್ವಾಮಿ ತೆಪ್ಪೋತ್ಸವದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆದವು. ಜನರನ್ನ ಆಕರ್ಷಿಸುವ ನಿಟ್ಟಿನಲ್ಲಿ ಈ ಬಾರಿ ರಾಜ್ಯ ಸರ್ಕಾರ ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಮೂಲಕ ಮನರಂಜನೆ ನೀಡಲಾಯಿತು.
ವೈರಮುಡಿ ಇತಿಹಾಸದಲ್ಲೇ ಮೊದಲ ಬಾರಿಗೆ ಈ ರೀತಿ ವಿಶೇಷವಾಗಿ ಲೇಜರ್ ಶೋ ಮೂಲಕ ಮೇಲುಕೋಟೆ ಇತಿಹಾಸ ನಾಡಿನ ಸಂಸ್ಕೃತಿ ಬಗ್ಗೆ ಅನಾವರಣ ಮಾಡಲಾಯಿತು. ನೂರಾರು ಭಕ್ತರು ತೆಪ್ಪೋತ್ಸವ ಹಾಗೂ ಗಂಗಾರತಿಯನ್ನ ಕಣ್ತುಂಬಿಕೊಂಡರು.
ಚೆಲುವನಾರಾಯಣಸ್ವಾಮಿಗೆ 1614 ಜುಲೈ 1ರಂದು ರಾಜ ಒಡೆಯರ್ ನೀಡಿದ ರಾಜಮುಡಿ ಧರಿಸಿ ತೆಪ್ಪೋತ್ಸವ ಜರುಗಿತು. ಭಕ್ತರು ಸಹ ಈ ಬಾರಿ ಈ ವಿಶೇಷತೆಯನ್ನ ಕಣ್ತುಂಬಿಕೊಂಡಿದ್ದಾರೆ. ಜಿಲ್ಲಾಡಳಿತ ಹಾಗೂ ಸರ್ಕಾರವೂ ಸಹ ಈ ಬಾರಿ ವಿಶೇಷವಾಗಿ ವೈರಮುಡಿ ಉತ್ಸವಕ್ಕೆ ಒತ್ತು ನೀಡಿದ್ದಾರೆ ಎಂದು ಪ್ರಧಾನ ಅರ್ಚಕ ಸೆಲ್ವೆ ಪಿಳ್ಳೈ ಅಯ್ಯಂಗಾರ್ ತಿಳಿಸಿದರು.