ಮಂಡ್ಯ: ನಾಗಮಂಗಲ ಕ್ಷೇತ್ರದಲ್ಲಿ ಕಳೆದ ಚುನಾವಣೆಯ ಸೋಲನ್ನು ನೆನೆದು ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು. ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಇಂದು ತಾಲೂಕು ಕಚೇರಿ ವೃತ್ತದಿಂದ ಐಬಿ ವೃತ್ತದ ವರೆಗೂ ಬೃಹತ್ ರೋಡ್ ಶೋ ನಡೆಸಲಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಬೇಕಿದ್ದ ರೋಡ್ ಶೋ ವನ್ನು ಕೈ ಅಭ್ಯರ್ಥಿ ಚಲುವರಾಯಸ್ವಾಮಿ ಅವರೇ ನಡೆಸಿದರು. ಬಳಿಕ ನಾಗಮಂಗಲದ ಬಡಗೂಡಮ್ಮ ದೇವಸ್ಥಾನದ ಆವರಣದಲ್ಲಿ ಕಾಂಗ್ರೆಸ್ ಪ್ರಚಾರ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, 47 ಸಾವಿರ ಮತಗಳಿಂದ ನನ್ನನ್ನ ಸೋಲಿಸಿದ್ದರು. ನನ್ನ ಸೋಲಿನಿಂದ ನಿಮಗೆ ನೋವಾಗಿದೆಯೋ ಇಲ್ವೋ ಗೊತ್ತಿಲ್ಲ. ಇಡೀ ರಾಜ್ಯದ ಜನ ನೊಂದಿದ್ದಾರೆ. ನಾನು ಅಧಿಕಾರದಲ್ಲಿದ್ದಾಗ ಏನೆಲ್ಲ ಅಭಿವೃದ್ಧಿ ಮಾಡಿದ್ದೀನಿ ನೀವೇ ನೋಡಿ. ಕಳೆದ 5 ವರ್ಷಗಳಿಂದ ಜೆಡಿಎಸ್ ಶಾಸಕ ಮಾಡಿರೋದು ಏನು? ನಾನು ಆರಂಭಿಸಿದ ಕಾಮಗಾರಿಗಳನ್ನ ಇನ್ನೂ ಪೂರ್ಣಗೊಳಿಸಿಲ್ಲ. ತಾಲೂಕು ಕಚೇರಿಯಲ್ಲಿ ಲಂಚಾವತಾರ ಹೆಚ್ಚಾಗಿದೆ. ಆ ರೀತಿ ನಾನು ಯಾವತ್ತಾದ್ರೂ ಲೂಟಿ ಮಾಡಿದ್ದೀನ? ಮತ್ಯಾವುದ್ಕಾಗಿ ನನನ್ನು ಸೋಲಿಸಿದ್ರಿ? ಎಂದು ಪ್ರಶ್ನಿಸಿದರು.
ಜೆಡಿಎಸ್ ಪಕ್ಷಕ್ಕೆ ದ್ರೋಹ ಮಾಡಿದೆ ಅಂತಾರೆ. ನಾನು ಆ ಪಕ್ಷಕ್ಕೆ ಏನು ದ್ರೋಹ ಮಾಡಿಲ್ಲ. ದೇವೇಗೌಡರ ಬಗ್ಗೆ ಅವರ ಮಕ್ಕಳಿಗಿಂತ ಹೆಚ್ಚಿನ ಅಭಿಮಾನ ನನಗಿದೆ. ಕಾಂಗ್ರೆಸ್ ಪಕ್ಷಕ್ಕೆ ನಾನು ಏನೂ ಕೊಟ್ಟಿಲ್ಲ. ನಾನು ಕಾಂಗ್ರೆಸ್‌ಗೆ ಬಂದ ಬಳಿಕ ಏಳಕ್ಕೆ ಏಳು ಕ್ಷೇತ್ರ ಸೋತಿದ್ದೇವೆ. ಆದರೂ ಕಾಂಗ್ರೆಸ್ ಪಕ್ಷ ನನ್ನನ್ನ ನಿರ್ಲಕ್ಷ್ಯ ಮಾಡಿಲ್ಲ. ನಾನು ಈ ಬಾರಿ ಸೋತರೆ ರಾಜಕೀಯ ನಿವೃತ್ತಿ ಘೋಷನೆ ಮಾಡ್ತೀನಿ ಎಂದು ಭಾಷಣದ ಮಧ್ಯೆ ಗಳಗಳನೆ ಕಣ್ಣೀರಿಟ್ಟರು. ಆಗ ಅಭಿಮಾನಿಗಳು ಮತ್ತು ಕಾರ್ಯಕರ್ತರು ಅಳಬೇಡಿ ಈ ಬಾರಿ ಗೆದ್ದೇ ಗೆಲ್ಲಿಸ್ತೀವಿ ಸುಮ್ಮನಿರಿ ಎಂದ ಸಮಾಧಾನ ಪಡಿಸಿದರು.
ಇನ್ನು ಈ ಚುನಾವಣೆಯಲ್ಲಿ ಗೆದ್ದರೇ ಹೊಸ ರಾಜಕೀಯ ಅಧ್ಯಾಯ ಶುರು ಮಾಡ್ತೀನಿ. ನನ್ನ ಕುಟುಂಬದವರಿಗೆ, ಸ್ನೇಹಿತರಿಗೆ ಗುತ್ತಿಗೆ ತೆಗೆದುಕೊಳ್ಳಲು ಬಿಟ್ಟಿಲ್ಲ. ಇವತ್ತು ಯಾರೋ ಮಹಿಳೆ ಕರೆ ಮಾಡಿ ಊರಿನಲ್ಲಿ ಐಪಿಎಲ್ ಬೆಟ್ಟಂಗ್, ಗಾಂಜಾ, ಇಸ್ಪೀಟ್ ನಡೆಯುತ್ತಿದೆ ಎಂದರು. ನಾನು ಎಂಎಲ್ಎ ಆಗಿದ್ದಾಗ ಕ್ಷೇತ್ರದಲ್ಲಿ ಈ ರೀತಿಯ ಅಕ್ರಮಕ್ಕೆ ಅವಕಾಶ ಕೊಟ್ಟಿಲ್ಲ, ಎಲ್ಲರೂ ಇವತ್ತು ದೃಢ ನಿರ್ಧಾರ ತೆಗೆದುಕೊಂಡಿದ್ದಾರೆ. ನಾಯಕರು ಕೂಡ ತಮ್ಮ ಆತಂಕ ಬಿಟ್ಟು ಕೆಲಸ ಮಾಡಿ. ಹಳ್ಳಿ ಹಳ್ಳಿಗೆ ಹೋಗಿ ಮತಯಾಚನೆ ಮಾಡಿ. ನಾನು ಶೋಕಿ ಮಾಡೋಕೆ, ಹಣ ಒಡೆಯಲು, ಭ್ರಷ್ಟಾಚಾರಕ್ಕೆ ಮತ ಕೇಳ್ತಿಲ್ಲ. ಅಭಿವೃದ್ಧಿಗಾಗಿ ಮತ ಕೇಳ್ತಿದ್ದೀನಿ. ಕಾಂಗ್ರೆಸ್ ಸರ್ಕಾರ ರಚನೆ ಆಗೋದು ನಿಶ್ಚಿತ. ಸರ್ಕಾರದಲ್ಲಿ ನಾನು ಕೆಲಸ ಮಾಡೋಕೆ ಅವಕಾಶ ಮಾಡಿಕೊಡಿ ಎಂದು ಕಣ್ಣೀರಿಟ್ಟು ಜನರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:ಮೇಕೆದಾಟು ಯೋಜನೆ ಆಗಬೇಕಾದ್ರೆ ಅದು ಪ್ರಾದೇಶಿಕ ಪಾರ್ಟಿಯಿಂದ ಮಾತ್ರ ಸಾಧ್ಯ: ಹೆಚ್ ಡಿ ದೇವೇಗೌಡ