ಮಂಡ್ಯ: ಕೆರೆಯಲ್ಲಿ ಮುಳುಗಿ ಸಾವಿಗೀಡಾದ ದಲಿತ ಕುಟುಂಬದ ಹೆಣ್ಣುಮಕ್ಕಳಿಗೆ ಸಿಎಂ ಬಿಎಸ್ವೈ ತಲಾ 5 ಲಕ್ಷ ರೂಪಾಯಿ ಘೋಷಣೆ ಮಾಡಿದ್ದರು. ಆದರೆ ಜಿಲ್ಲಾಡಳಿತ ಮೂವರಿಗೆ ಕೇವಲ 5 ಲಕ್ಷ ರೂಪಾಯಿ ನೀಡಿದೆ.
ನಾಗಮಂಗಲ ತಾಲೂಕಿನ ಬೀರನಹಳ್ಳಿಯ ದಲಿತ ನರಸಿಂಹಯ್ಯ ಕುಟುಂಬದ ಮೂವರು ಹೆಣ್ಣು ಮಕ್ಕಳು ಜೂನ್ 14ರಂದು ಜಲ ಸಮಾಧಿಯಾಗಿದ್ದರು. ಅಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಮೂವರಿಗೆ 15 ಲಕ್ಷ ರೂಪಾಯಿ ಘೋಷಣೆ ಮಾಡಿ ತುರ್ತು ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.
ಘಟನೆ ನಡೆದು ಎರಡು ತಿಂಗಳಾದರೂ ಕುಟುಂಬಕ್ಕೆ ಪರಿಹಾರ ವಿತರಣೆ ಮಾಡಿರಲಿಲ್ಲ. ಈ ಬಗ್ಗೆ ಈಟಿವಿ ಭಾರತ ವರದಿ ಪ್ರಸಾರ ಮಾಡಿತ್ತು. ಇದರಿಂದ ಎಚ್ಚೆತ್ತ ಜಿಲ್ಲಾಡಳಿತ ಪರಿಹಾರ ವಿತರಣೆ ಮಾಡಿದೆ ನಿಜ, ಆದರೆ ಸಿಎಂ ಘೋಷಣೆ ಮಾಡಿದ್ದೇ ಬೇರೆ, ಜಿಲ್ಲಾಡಳಿತ ನೀಡಿದ್ದೇ ಬೇರೆ ಮೊತ್ತವಾಗಿದೆ.
ಚೆಕ್ ನಂಬರ್ ಬದಲಾವಣೆ:
ತಾಲೂಕಾಡಳಿತ ನೀಡಿರುವ ಚೆಕ್ ನಂಬರ್ ಹಾಗೂ ಕಚೇರಿ ದಾಖಲೆಯಲ್ಲಿ ನಮೂದು ಮಾಡಿರುವ ನಂಬರ್‌ನಲ್ಲಿ ವ್ಯತ್ಯಾಸ ಕಂಡು ಬಂದಿದೆ. ನೀಡಿರುವ ಚೆಕ್ ಎಸ್‌ಬಿಐ ಬ್ಯಾಂಕ್‌ನದ್ದಾಗಿದ್ದು, ಅದರ ಸಂಖ್ಯೆ 832671 ಆಗಿದೆ. ಆದರೆ ಕಚೇರಿ ದಾಖಲಾತಿಯಲ್ಲಿ ಚೆಕ್ ಸಂಖ್ಯೆಯನ್ನು 286776 ಎಂದು ನಮೂದು ಮಾಡಲಾಗಿದೆ. ಇದು ಹೇಗೆ ಎಂಬ ಪ್ರಶ್ನೆ ಮೂಡಿದ್ದು, ಸಿಎಂ ಘೋಷಣೆ ಮಾಡಿದ ಪರಿಹಾರದ ಮೊತ್ತದ ಚೆಕ್ ಗೋಲ್‌ಮಾಲ್ ಮಾಡಲಾಗಿದೆಯಾ ಎಂಬ ಅನುಮಾನ ಮೂಡಿದೆ.