ಮಂಡ್ಯ : ಕಾನ್ಸ್ಟೇಬಲ್ ಒಬ್ಬರ ಪತ್ನಿಯ ಸರಗಳ್ಳತನ ಪ್ರಕರಣದ ಜಾಡು ಹಿಡಿದ ಪೊಲೀಸರು, ಮೂವರು ಅಂತರ್ ಜಿಲ್ಲಾ ಸರಗಳ್ಳರನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ 300 ಗ್ರಾಂ ಚಿನ್ನಾಭರಣ, ಎರಡು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಒಂಬತ್ತು ಜಿಲ್ಲೆಗಳ 26 ಪ್ರಕರಣಗಳನ್ನು ಬೇಧಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಶ್ರೀನಗರದ ಎಸ್.ಕುಮಾರ್ (ಬಿಡದಿ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದ ಆರೋಪದ ಮೇಲೆ ರಾಮನಗರ ಜಿಲ್ಲಾ ಉಪಕಾರಾಗೃಹದಲ್ಲಿ ಇದ್ದನು), ಇಟ್ಟಮಡುವಿನ ವಿ.ಲಿಖಿತ್, ಪಿ.ನಿಖಿಲ್ ಬಂಧಿತ ಆರೋಪಿಗಳು.
ಕುಮಾರ್‌ನನ್ನು ಕಾರಾಗೃಹದಿಂದ ವಶಕ್ಕೆ ಪಡೆಯಲಾಗಿದೆ. ಇವರು ದುಶ್ಚಟಗಳಿಗೆ ದಾಸರಾಗಿದ್ದು, ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡುತ್ತಿದ್ದರು ಎಂದು ಎಸ್‌ಪಿ ಡಾ.ಎಂ.ಅಶ್ವಿನಿ ತಿಳಿಸಿದರು.
ಏ. 26 ರಂದು ಡಿಎಆರ್ ಕಾನ್ಸ್ಟೇಬಲ್ ಟಿ.ಪಿ. ಮಂಜೇಶ್ ಅವರ ಪತ್ನಿ ಟಿ.ಸಿ.ಲಕ್ಷ್ಮಿ ಅವರು, ಸ್ಕೂಟರ್‌ನಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಖದೀಮರು ಲಕ್ಷ್ಮಿ ಅವರನ್ನು ಬೀಳಿಸಿ ಚಾಕು ತೋರಿಸಿ ಅವರ ಬಳಿ ಇದ್ದ 40 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದರು. ಈ ಸಂಬಂಧ ನಾಗಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇಬ್ಬರು ಆರೋಪಿಗಳು ಮೇ 14 ನಾಗಮಂಗಲ ತಾಲೂಕಿನ ದೇವಲಾಪುರ ಹ್ಯಾಂಡ್ ಪೋಸ್ಟ್ ಹತ್ತಿರ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಂಡ್ಯ (06), ಮೈಸೂರು ಜಿಲ್ಲೆ (03), ಬೆಂಗಳೂರು (05), ಹಾಸನ (02), ಶಿವಮೊಗ್ಗ (01), ರಾಮನಗರ (02), ಕೋಲಾರ (04), ಚಿಕ್ಕಬಳ್ಳಾಪುರ (02), ತುಮಕೂರು ಜಿಲ್ಲೆಯ ಒಂದು ಸೇರಿದಂತೆ ಒಟ್ಟು 26 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
ಮೂವರೊಂದಿಗೆ ಇನ್ನೊಬ್ಬ ಸೇರಿದಂತೆ ನಾಲ್ವರು ಎರಡು ಬೈಕ್‌ನಲ್ಲಿ ಕಳ್ಳತನ ಮಾಡುತ್ತಿದ್ದರು. ಕೊಲೆ ಆರೋಪದ ಮೇಲೆ ಕುಮಾರ್ ಜೈಲಿಗೆ ಸೇರಿದ ನಂತರ ಇಬ್ಬರೇ ಸರಗಳ್ಳತನ ಮಾಡುತ್ತಿದ್ದರು. 26 ರಂದು 8 ಪ್ರಕರಣಗಳಲ್ಲಿ ಚಿನ್ನಾಭರಣ ನೀಡದ ಕಾರಣ ಅವರಿಗೆ ಚಾಕುವಿನಿಂದ ಚುಚ್ಚಿದ್ದಾರೆ.
ನಾಗಮಂಗಲದ ಪ್ರಕರಣದಲ್ಲಿ ಲಿಖಿತ್, ನಿಖಿಲ್ ಬಂಧಿಸಿದಾಗ ಕುಮಾರ್ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ನಂತರ ಆತನನ್ನು ವಶಕ್ಕೆ ಪಡೆದು ಪ್ರಕರಣಗಳ ವಿಚಾರಣೆ ನಡೆಸಲಾಯಿತು ಎಂದು ಹೇಳಿದರು.
ಸರಗಳ್ಳತನಕ್ಕೆ ಸಿನಿಮಾ ಸ್ಪೂರ್ತಿ: ಚಲನಚಿತ್ರ ನೋಡಿ ಕಳ್ಳತನ ಮಾಡುತ್ತಿದ್ದ ಇವರು ಯಾವುದೇ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡಿರಲಿಲ್ಲ. ಇಲ್ಲಿ ಸರಗಳ್ಳತನ ಮಾಡಿದ ನಂತರ ಬೇರೆಡೆ ತೆರಳಿ ಅಲ್ಲಿ ಸರಗಳ್ಳತನ ಮಾಡುತ್ತಿದ್ದರು.
ಮಾಂಗಲ್ಯ ಸರವನ್ನು ಇಟ್ಟುಕೊಳ್ಳದೆ ದೇವಸ್ಥಾನದ ಹುಂಡಿಗೆ ಹಾಕುತ್ತಿದ್ದರು ಅಥವಾ ಬಿಸಾಡುತ್ತಿದ್ದರು. ಕೆಲ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದು, ಅವುಗಳನ್ನು ವಶಕ್ಕೆ ಪಡೆದು ಸಂತ್ರಸ್ತರಿಗೆ ನೀಡಲಾಗುವುದು ಎಂದು ಹೇಳಿದರು.
ಕೆಆರ್‌ಎಸ್ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಅಶೋಕ್ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಹೊಂಗಳ್ಳಿ ಗ್ರಾಮದ ಚಂದ್ರ, ಶ್ರೀಧರ್ ಬಂಧಿತರು.
ಆರೋಪಿಗಳಿಂದ ಬೈಕ್, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಸಾಲ ಹಾಗೂ ಅಕ್ರಮ ಸಂಬಂಧದಿಂದ ಅಶೋಕ್‌ನನ್ನು ಕೊಲೆ ಮಾಡಿದ್ದರು. ಅಪಘಾತ ನಡೆದಿರುವ ರೀತಿಯಲ್ಲಿ ಬಿಂಬಿಸಲು ಭತ್ತದ ಗದ್ದೆಗೆ ಏರಿ ಮೇಲಿಂದ ತಳ್ಳಿದ್ದರು ಎಂದು ಹೇಳಿದರು.