ಮಂಡ್ಯ: ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಅಂಕೇಗೌಡರಿಗೆ ಪುಸ್ತಕಗಳೆಂದರೆ ಪ್ರೀತಿ. ಇದಕ್ಕೆ ಕಾರಣವಾಗಿದ್ದು ಶಾಲಾ ಗ್ರಂಥಾಲಯ. ಶಾಲಾ ದಿನಗಳಲ್ಲಿ ಪುಸ್ತಕಕ್ಕಾಗಿ ಶಾಲಾ ಗ್ರಂಥಾಲಯಕ್ಕೆ ಹೋದ ಅಂಕೇಗೌಡರಿಗೆ ಶಿಕ್ಷಕರು ಹೇಳಿದ ಒಂದು ಮಾತು ಇಂದು ವಿಶ್ವದ ದೊಡ್ಡ ಖಾಸಗಿ ಗ್ರಂಥಾಲಯ ನಿರ್ಮಾಣಕ್ಕೆ ಕಾರಣವಾಯಿತು.
ಶಾಲಾ ದಿನಗಳಲ್ಲಿ ಪುಸ್ತಕಗಳನ್ನು ಮನೆಗೆ ಕೊಡದ ಹಿನ್ನೆಲೆ ಪುಸ್ತಕ ಸಂಗ್ರಹ ಹಾಗೂ ಖರೀದಿಗೆ ಮುಂದಾದ ಅಂಕೇಗೌಡರು, ಇಂದು ದೊಡ್ಡ ಜ್ಞಾನ ಭಂಡಾರವನ್ನೇ ಸೃಷ್ಟಿ ಮಾಡಿದ್ದಾರೆ. ಪಾಂಡವಪುರದಿಂದ ಕೇವಲ ಒಂದು ಕಿಲೋ ಮೀಟರ್ ದೂರದ ಹರಳಹಳ್ಳಿಯಲ್ಲಿ ಪುಸ್ತಕದ ಮನೆ ನಿರ್ಮಾಣ ಮಾಡಿದ್ದು, ಇಲ್ಲಿ ಲಕ್ಷಗಟ್ಟಲೆ ಪುಸ್ತಕಗಳ ಸಂಗ್ರಹವೇ ಇದೆ. ಒಂದೊಂದೇ ಪುಸ್ತಕ ಸಂಗ್ರಹ ಮಾಡುತ್ತಾ ಇಂದು ದೊಡ್ಡ ಸಂಗ್ರಹಾಲಯವನ್ನೇ ತೆರೆದಿದ್ದಾರೆ.
ಈಗಾಗಲೇ ಈ ಪುಸ್ತಕದ ಮನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ಗೆ ಸೇರಿಕೊಂಡಿದೆ. ಪ್ರತಿಯೊಂದು ಪುಸ್ತಕವೂ ಮೌಲ್ಯಯುತವಾಗಿದೆ. ಉದ್ಯಮಿ ಹರಿಕೋಡೆ ಕಟ್ಟಿಕೊಟ್ಟ ಈ ಕಟ್ಟಡ ಈಗ ಮನೆಗೆ ಮತ್ತೊಂದು ಆಯಾಮ ನೀಡಿದೆ. ಸಣ್ಣ ಕಟ್ಟಡದಲ್ಲೇ ಮೊದ ಮೊದಲು ಪುಸ್ತಕ ಮನೆಯನ್ನು ಆರಂಭ ಮಾಡಲಾಗಿತ್ತು. ಅಂಕೇಗೌಡರ ಈ ಕಾರ್ಯಕ್ಕೆ ಅವರ ಪತ್ನಿಯ ಸಹಕಾರ ಇದೆ. ಪುಸ್ತಕಗಳ ಜೋಡಿಸುವಿಕೆಯಿಂದ ಹಿಡಿದು ಸ್ವಚ್ಛತಾ ಕಾರ್ಯದಲ್ಲೂ ಕೈಜೋಡಿಸಿ ಪತಿಯ ಕಾರ್ಯಕ್ಕೆ ಸಹಕಾರ ನೀಡುತ್ತಾ ಬಂದಿದ್ದಾರೆ.
ರಾಜ್ಯ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಹಣ ನೀಡಿದ್ದು, ಕಾಮಗಾರಿಯೂ ನಡೆಯುತ್ತಿದೆ. ಆದರೆ ಪುಸ್ತಕಗಳ ನಿರ್ವಹಣೆಗೆ ಸಾಕಷ್ಟು ಅನುದಾನದ ಅವಶ್ಯಕತೆ ಇದೆ. ಕೆಲವೊಂದು ಸಂಸ್ಥೆಗಳು ಅಲ್ಮೇರಾದ ಸಹಾಯ ಮಾಡಿವೆ. ಆದರೆ ಈಗಿರುವ ಪುಸ್ತಕಗಳಿಗೆ ಮತ್ತಷ್ಟು ಅಲ್ಮೇರಾಗಳ ಅವಶ್ಯಕತೆ ಇದೆ.