ಮಂಡ್ಯ : ಕೆ.ಆರ್ ಪೇಟೆಯಲ್ಲಿ ಚುನಾವಣಾ ಕಾವು ರಂಗೇರಿದ್ದು, ಇಂದು ಬಿ.ವೈ. ವಿಜಯೇಂದ್ರ ಹಾಗೂ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಕ್ಷೇತ್ರದ ಅಭಿವೃದ್ಧಿ ಅಜೆಂಡಾ ಇರುವ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಬಿಜೆಪಿ ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ, ಸಾರ್ವತ್ರಿಕ ಚುನಾವಣೆಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಉಪಚುನಾವಣೆಗೂ ಇದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟೂರಿನ ಕ್ಷೇತ್ರ. ಈ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿ ಆಗಬೇಕು ಎಂದು ಯಡಿಯೂರಪ್ಪ ಅವರಿಗೆ ಕನಸಿದೆ. ಕೆ.ಆರ್.ಪೇಟೆ ಅಭಿವೃದ್ಧಿಯ ದೃಷ್ಟಿಯಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಅಭಿವೃದ್ಧಿಗಳ ಪಟ್ಟಿ ಮಾಡಿದ್ದೇವೆ. ನವ ಕೃಷ್ಣರಾಜಪೇಟೆ ಎಂಬ ಕನಸಿನ ಮೂಲಕ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದರು.
ಕೆ.ಆರ್ ಪೇಟೆ ಕ್ಷೇತ್ರವನ್ನು ಬಿಜೆಪಿ ಗೆಲ್ಲಬೇಕು ಎಂದು ಗುರಿ ಇಟ್ಟುಕೊಂಡಿದ್ದೇವೆ. ಅದರ ಜೊತೆಗೆ ಕ್ಷೇತ್ರದ ಅಭಿವೃದ್ಧಿ ನಮ್ಮ ಗುರಿ. ಕೆ.ಆರ್ ಪೇಟೆ ಕ್ಷೇತ್ರ ಸದ್ಯ ಅತ್ಯಂತ ಹಿಂದುಳಿದಿದೆ. ಶೇಕಡಾ 80 ರಷ್ಟು ಹಳ್ಳಿಗಳಲ್ಲಿ ಸರಿಯಾದ ರಸ್ತೆ ಇಲ್ಲ. ಹಲವು ಭಾಗಗಳಲ್ಲಿ ನೀರಿನ ಹಾಹಾಕಾರವಿದೆ. ಯುವಕರು ಉದ್ಯೋಗಕ್ಕೆ ಬೇರೆ ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಡೆದು ಇಲ್ಲೇ ಉದ್ಯೋಗ ಸೃಷ್ಟಿ ಮಾಡಬೇಕು. ಮಂಡ್ಯ ಮತ್ತು ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಬೇಕು. ಮಹಿಳೆಯರಿಂದ ಉದ್ಯೋಗ ನೀಡುವ ನಿಟ್ಟಿನಲ್ಲಿ ಹೆಚ್ಚಿನ ಗಮನ ನೀಡಬೇಕು. ಈ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ ಎಂದರು.