ಮಂಡ್ಯ: ಬಿಜೆಪಿಯ ದುರಾಡಳಿತ ಹಾಗೂ ಕಾಂಗ್ರೆಸ್ನ ಸುಳ್ಳು ಆಶ್ವಾಸನೆಗೆ ಜನರು ಮಾರುಹೋಗಿದ್ದಾರೆ. ನಾಗಮಂಗಲದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವುದೇ ಬಿಜೆಪಿಯ ಗುರಿಯಾಗಿತ್ತು ಎಂದು ಜೆಡಿಎಸ್ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಆರೋಪಿಸಿದ್ದಾರೆ. ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸುರೇಶ್ ಗೌಡ ಅವರು ಕೇವಲ ನಾಲ್ಕು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರು ಕೊಟ್ಟ ತೀರ್ಪುನ್ನು ಒಪ್ಪಿಕೊಳ್ಳಬೇಕು. ಚುನಾವಣೆಯಲ್ಲಿ 4,173 ಮತಗಳ ಅಂತರದಿಂದ ಸೋತಿದ್ದೇನೆ. ಕೆಲವು ಸಮಾಜದ ಮತಗಳು ಒಂದೇ ಕಡೆ ಹೋಗಿದ್ದರಿಂದ ನಮಗೆ ಸೋಲಾಗಿದೆ. ಕೆಲವು ಕಡೆ ನಿರೀಕ್ಷೆಯ ಮಟ್ಟದಲ್ಲಿ ಲೀಡ್ ಬಂದಿಲ್ಲ. ಸುಮಾರು 150 ಬೂತ್ಗಳಲ್ಲಿ ಲೀಡ್ ಕಮ್ಮಿ ಇದೆ. ಎಲ್ಲೋ ಒಂದು ಕಡೆ ವ್ಯತ್ಯಾಸ ಆಗಿದೆ ಅಷ್ಟೆ ಎಂದು ಹೇಳಿದರು.
ಗೆಲುವಿನ ಸಮೀಪಕ್ಕೆ ಹೋಗಿ ನಾವು ಎಡವಿದ್ದೇವೆ. ಈ ಚುನಾವಣೆಯ ಫಲಿತಾಂಶ ಅರ್ಥವಾಗುತ್ತಿಲ್ಲ. ಯಾವ ಕಾರಣಕ್ಕಾಗಿ ಮತಗಳು ಕಮ್ಮಿ ಬಂದಿವೆ ಎಂದು ಪರಾಮರ್ಶೆ ಮಾಡಬೇಕಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಕಣಕ್ಕಿಳಿದಿರಲಿಲ್ಲ. ಕಳೆದ ಮೂರು ವರ್ಷದಿಂದ ನನ್ನನ್ನು ಸೋಲಿಸುವ ಷಡ್ಯಂತ್ರವನ್ನು ರೂಪಿಸುತ್ತಿದ್ದರು. ನಮ್ಮ ಹುಷಾರಿನಲ್ಲಿ ನಾವು ಇರಬೇಕಿತ್ತು ಕೆಲವು ಕಾಣದ ಕೈಗಳು ಈ ಕೆಲಸ ಮಾಡಿವೆ ಎಂದು ಹೇಳಿದರು.
ಇನ್ನು ದೇವೇಗೌಡರ ಬಗ್ಗೆ ಚಲುವರಾಯಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಸಲಹೆಯನ್ನು ಸ್ವೀಕರಿಸುತ್ತೇನೆ. ಅವರಿಗೆ ತಂದೆ ಇಲ್ವಲ್ಲ ಅದಕ್ಕೆ ಹಾಗೇ ಹೇಳಿದ್ದಾರೆ ಎಂದು ಹೇಳಿದರು. ಅಧಿಕಾರ ಯಾರ ಸ್ವತ್ತಲ್ಲ. ಚುನಾವಣೆಯಲ್ಲಿ ಸೋತರು ಜನರ ಸಂಪರ್ಕದಲ್ಲೇ ಇರುತ್ತೇನೆ. ಜನರ ಜೊತೆ ಇದ್ದು ಕೆಲಸ ಮಾಡ್ಕೊಂಡು ಹೋಗುತ್ತೇನೆ. ಪಕ್ಷ ಸಂಘಟನೆ ಮಾಡ್ತೇವೆ ಎಂದು ಹೇಳಿದರು. ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಿಖಿಲ್ ಅವರು ಸೋತಿದ್ದನ್ನು ಕೇಳಿ ಬಹಳ ಆಶ್ಚರ್ಯವಾಗಿದೆ ಅವರು ಏನಕ್ಕೆ ಸೋತರು ಎಂದು ನನಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದರು.
ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷರಿಗೆ ಆರೋಗ್ಯ ಸಮಸ್ಯೆ; ವಿಶ್ರಾಂತಿಗೆ ಸಲಹೆ ನೀಡಿದ ವೈದ್ಯರು