ಮಂಡ್ಯ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಕಾರ್ಯಕರ್ತರು ಕೃಷಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಇಂದು ಮಾಜಿ ಸಚಿವ ಡಾ.ಅಶ್ವತ್ಥ ನಾರಾಯಣ ಧರಣಿಯಲ್ಲಿ ಭಾಗಿಯಾಗಿ ಕಾರ್ಯಕರ್ತರಿಗೆ ಬೆಂಬಲ ನೀಡಿದರು. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿದ ಅವರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ಎದ್ದು ಕಾಣ್ತಿದೆ. ಎಲ್ಲಿ ನೋಡಿದರೂ ಭ್ರಷ್ಟಾಚಾರದ ಆರೋಪಗಳು. ಭ್ರಷ್ಟಾಚಾರದಲ್ಲೇ ತೊಡಗಿರುವ ಪಕ್ಷ ಕಾಂಗ್ರೆಸ್ ಪಕ್ಷ. ಜನರ ಕಷ್ಟ ಅರ್ಥಮಾಡಿಕೊಳ್ಳದೆ ಜನರ ರಕ್ತ ಹೀರುತ್ತಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಪೇಸಿಎಸ್ ಅಭಿಯಾನ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡ್ತಿದ್ದಾರೆ. ಚಲುವರಾಯಸ್ವಾಮಿ ಜಿಲ್ಲೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದರು.
ರೈತ ವಿರೋಧಿ ಸಿಎಂ: ಕಾಂಗ್ರೆಸ್ ಅಧಿಕಾರಕ್ಕೆ ಬಂದಕಾಲದಿಂದಲೂ ರೈತ ವಿರೋಧಿಯಾಗಿದೆ. ಹಲವು ಯೋಜನೆಗಳನ್ನು ವಾಪಸ್ ಪಡೆದಿದ್ದಾರೆ. 50% ಬಜೆಟ್‌ನಲ್ಲಿ ಕಡಿತ ಮಾಡಿದ್ದಾರೆ. ಸಿದ್ದರಾಮಯ್ಯ ರೈತ ವಿರೋಧಿಯಾಗಿದ್ದಾರೆ. ಇವರ ಕಾಲದಲ್ಲಿ ಕೊಲೆ, ಸುಲಿಗೆ ದರೋಡೆ ನಡೆಯುತ್ತಿದೆ ಎಂದು ಆರೋಪಿಸಿದರು.
ಲೋಕಾಯುಕ್ತ ತನಿಖೆಯಾಗಲಿ: ಆ.17 ರಂದು ರಾಜ್ಯಪಾಲರನ್ನ ಭೇಟಿ ಮಾಡ್ತೇವೆ. ಚಲುವರಾಯಸ್ವಾಮಿ ಅವರ ಮೇಲೆ ಲೋಕಾಯುಕ್ತ ತನಿಖೆಯಾಗಬೇಕು, ಮಂತ್ರಿ ಮಂಡಲದಿಂದ ಚಲುವರಾಯಸ್ವಾಮಿ, ಡಿ.ಕೆ.ಶಿವಕುಮಾರ್ ಅವರನ್ನು ವಜಾ ಮಾಡಬೇಕು. ಇಬ್ಬರ ಮೇಲೂ ಲೋಕಾಯುಕ್ತ ತನಿಖೆಯಾಗಬೇಕು. ಕಾಂಗ್ರೆಸ್ನ ಹಿರಿಯ ನಾಯಕರ ಮೇಲೆ ಗುತ್ತಿಗೆದಾರರು 15% ಹಣ ಬೇಡಿಕೆ ಇಟ್ಟಿದ್ದಾರೆ ಎಂದು ಆಪಾದನೆ ಮಾಡುತ್ತಿದ್ದಾರೆ. ಭಯಭೀತರಾಗಿ ದಿಕ್ಕೆಟ್ಟು ಡಿಕೆಶಿ ಆತಂಕದಲ್ಲಿ ಓಡಾಡ್ತಿದ್ದಾರೆ ಎಂದರು.
ಇದನ್ನೂ ಓದಿ: 'ಶಾಲೆಗಳಲ್ಲಿ ವಾಟರ್ ಬೆಲ್ ಯೋಜನೆ ಪುನರಾರಂಭಿಸಿ': ಸಚಿವ ಮಧು ಬಂಗಾರಪ್ಪಗೆ ಸುರೇಶ್ ಕುಮಾರ್ ಪತ್ರ