ಮಂಡ್ಯ : ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಇಂದು ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗವಹಿಸಿದರು. ಕಾರ್ಯಕರ್ತರಿಗೆ ಭಾರತ್ ಜೋಡೋ ಯಾತ್ರೆಯ ಉದ್ದೇಶ ಮತ್ತು ಕಾರಣ ತಿಳಿಸಲಾಯಿತು ಹಾಗೂ ಜನರು ಏಕೆ ಭಾಗವಹಿಸಬೇಕು ಎಂಬುದನ್ನು ವಿವರಿಸಲಾಯಿತು.
ನಂತರ ಮಾತನಾಡಿದ ಸಿದ್ದರಾಮಯ್ಯ, ಕುವೆಂಪು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು. ಆದರೆ, ಬಿಜೆಪಿ ಧರ್ಮ ರಾಜಕಾರಣಕ್ಕೆ ಕುಮ್ಮಕ್ಕು ನೀಡುತ್ತಿದೆ. ಮನು ಸ್ಮೃತಿ ಮೇಲೆ ನಂಬಿಕೆ ಇಟ್ಟಿರುವ ಬಿಜೆಪಿಯವರು ಸಂವಿಧಾನ ಮತ್ತು ಪ್ರಜಾಸತ್ತಾತ್ಮಕತೆ ಮೇಲೆ ಗೌರವ ನೀಡುತ್ತಿಲ್ಲ ಎಂದು ದೂರಿದರು.
ಡಿ ಕೆ ಶಿವಕುಮಾರ್ ಮಾತನಾಡಿ, ಮೋದಿ ಬಂದು ಸಿದ್ದರಾಮಯ್ಯ ಸರ್ಕಾರವನ್ನು 10 ಪರ್ಸೆಂಟ್ ಸರ್ಕಾರ ಎಂದು ಲೇವಡಿ ಮಾಡಿದ್ದರು. ಈಗ ಕಾಂಗ್ರೆಸ್ ಬಿಜೆಪಿ ಪಕ್ಷದ ಬಗ್ಗೆ ದೂರುತ್ತಿಲ್ಲ, ಆದರೆ, ಗುತ್ತಿಗೆದಾರರ ಸಂಘದವರೇ 40 ಪರ್ಸೆಂಟ್ ಸರ್ಕಾರ ಎಂದು ಹೇಳುತ್ತಿದ್ದಾರೆ. ಈ ಸರ್ಕಾರದ ಆಡಳಿತ ಬಂದ ನಂತರ ಯಾವ ಸರ್ಕಾರಿ ಕಚೇರಿಗೆ ಹೋದರೂ ಲಂಚವನ್ನೇ ಕೇಳುತ್ತಾರೆ ಎಂದರು.
ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಆನ್ಲೈನ್ ನೋಂದಣಿ ಆರಂಭವಾಗಿದೆ. ನಾಳೆಯಿಂದಲೇ ಪ್ರತಿ ಪಂಚಾಯಿತಿ ಮಟ್ಟದಲ್ಲಿ ಸಂಘಟನೆ ಮಾಡಿ. ಮಂಡ್ಯ ಜಿಲ್ಲೆಯಿಂದಲೇ ಕನಿಷ್ಠ 10 ಸಾವಿರ ಜನ ಸೇರಿಸುವ ಕಾರ್ಯ ಆಗಬೇಕು. ಕಾಸು ಕೊಟ್ಟು ಯಾರನ್ನೂ ಕರೆ ತರಬೇಡಿ. ಬದ್ಧತೆ ಮತ್ತು ನಾಯಕತ್ವ ಇರುವವರನ್ನು ಕರೆತನ್ನಿ ಎಂದು ಕರೆಕೊಟ್ಟರು.
ಇದನ್ನೂ ಓದಿ : ದಲಿತ ಸಹೋದರಿಯರ ಅತ್ಯಾಚಾರ ಕೊಲೆ ಪ್ರಕರಣ; ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ : ನಾರಾಯಣ ಸ್ವಾಮಿ