ಮಂಡ್ಯ: ಬೆಂಗಳೂರು-ಮೈಸೂರು ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 275 ದಶಪಥ ಆಗಲಿದೆ. ಆದರೆ, ರಾಷ್ಟ್ರೀಯ ಹೆದ್ದಾರಿ 275 ಅಗಲೀಕರಣ ಕಾಮಗಾರಿ ಇದೀಗ ರಾಜ್ಯ ಸರ್ಕಾರಕ್ಕೆ ಆತಂಕ ಹುಟ್ಟಿಸಿದೆ.
ಹೌದು, ಒಂದೆಡೆ ಗುತ್ತಿಗೆದಾರರಿಗೆ ಸರಿಯಾದ ಸಮಯಕ್ಕೆ ಭೂಮಿ ಹಸ್ತಾಂತರ ಮಾಡದ ಹಿನ್ನಲೆ ದಂಡ ಕಟ್ಟುವ ಭಯವಾದರೆ, ಇನ್ನೊಂದೆಡೆ ರೈತರು, ಭೂಮಿ ಕೋಡೋದಿಲ್ಲ, ನಮಗೆ ಅನ್ಯಾಯವಾಗಿದೆ ಎಂದು ಧರಣಿ ಆರಂಭಿಸಿದ್ದಾರೆ.
ಕಾಮಗಾರಿಗೆ ಬೇಕಾದ ಭೂಮಿಯನ್ನು ರಾಜ್ಯ ಸರ್ಕಾರ ಏಪ್ರಿಲ್‌ನಲ್ಲಿಯೇ ಗುತ್ತಿಗೆದಾರರಿಗೆ ಹಸ್ತಾಂತರ ಮಾಡಬೇಕಾಗಿತ್ತು. ಆದರೆ, ರೈತರು ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗಿದೆ ಎಂದು ಇನ್ನೂ ಭೂಮಿಯನ್ನು ನೀಡಿರಲಿಲ್ಲ. ದಂಡ ಹಾಕುವ ಸಾಧ್ಯತೆ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಗುತ್ತಿಗೆದಾರರಿಗೆ ಭೂಮಿ ಹಸ್ತಾಂತರ ಮಾಡಲು ಮುಂದಾಗಿದೆ.
ಈ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿ ಆರು ತಂಡಗಳನ್ನು ರಚನೆ ಮಾಡಿ ಭೂಮಿ ಬಿಡಿಸಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಒಪ್ಪದ ರೈತರು ಧರಣಿ ಶುರು ಮಾಡಿದ್ದಾರೆ.
ಹಣ ವಿತರಣೆಯಲ್ಲಿ ಏರುಪೇರು:
ಹಳೇ ಬೂದನೂರು ಗ್ರಾಮದಲ್ಲಿನ ಜನರಿಗೆ ಪರಿಹಾರ ವಿತರಣೆಯಲ್ಲಿ ಅನ್ಯಾಯ ಮಾಡಲಾಗಿದೆ ಎನ್ನಲಾಗಿದೆ.ರಾಜಕಾರಣಿಗಳಿಗೆ, ಸಂಬಂಧಿಗಳಿಗೆ ಪರಿಹಾರ ಹೆಚ್ಚಿಗೆ ನೀಡಲಾಗಿದೆ, ಬಡ ರೈತರಿಗೆ ಪರಿಹಾರ ಮೊತ್ತದ ನಿಗಧಿಯಲ್ಲಿ ಅನ್ಯಾಯ ಮಾಡಲಾಗಿದೆ ಎಂಬ ಆರೋಪ ರೈತರದ್ದು.
ಈ ಹಿನ್ನೆಲೆ ಭೂಮಿ ನೀಡೋದಿಲ್ಲ ಎಂದು ಪಟ್ಟು ಹಿಡಿದಿರುವ ರೈತರು, ಧರಣಿ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ರೈತರಿಗೆ ಪರಿಹಾರ ವಿತರಣೆಯಲ್ಲಿ ಅನ್ಯಾಯದ ಆಕ್ರೋಶವಿದ್ದರೆ, ಅತ್ತ ಅಧಿಕಾರಿಗಳಿಗೆ ದಂಡದ ಆತಂಕ ಎದುರಾಗಿದೆ. ಹೀಗಾಗಿ ಒಂದು ವಾರದೊಳಗೆ ಕಾಮಗಾರಿ ಆರಂಭಕ್ಕೆ ಭೂಮಿ ನೀಡಲು ಚಿಂತನೆ ನಡೆಸಲಾಗುತ್ತಿದೆ.