ಮಂಡ್ಯ: ಬೆಳ್ಳಂಬೆಳಗ್ಗೆ ಜೆಡಿಎಸ್ ಶಾಸಕರು ಜನರ ಸಮಸ್ಯೆ ನಿವಾರಣೆಗಾಗಿ ಹಳ್ಳಿ ಪ್ರವಾಸ ಕೈಗೊಂಡಿದ್ದಾರೆ. ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣಗೌಡ ಗದ್ದೆಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಜಾಗ ಬಿಡಿಸಿಕೊಡುವ ಬಗ್ಗೆ ಸ್ಥಳ ಪರಿಶೀಲನೆ ಮಾಡಿದರು.
ಶಾಸಕ ನಾರಾಯಣಗೌಡರಿಗೆ ತಹಸೀಲ್ದಾರ್ ಎಂ.ಶಿವಮೂರ್ತಿ ಸಾಥ್ ನೀಡಿದ್ದು, ಸ್ಥಳ ಪರಿಶೀಲನೆಯಲ್ಲಿ ಮಾರ್ಗದರ್ಶನ ನೀಡಿದರು. ಇನ್ನು ಕ್ಷುಲ್ಲಕ ಕಾರಣಕ್ಕಾಗಿ ಗ್ರಾಮದ ವ್ಯಕ್ತಿಯೊಬ್ಬ ರಸ್ತೆಯ ನಿರ್ಮಾಣಕ್ಕೆ ಜಾಗ ಬಿಟ್ಟು ಕೊಡದೇ ಗ್ರಾಮಕ್ಕೆ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡ ಪಾಂಡು ಮತ್ತು ಮಂಜೇಗೌಡರ ನಡುವೆ ಮಾತಿನ ಚಕಮಕಿ ನಡೆಯಿತು.
ಗ್ರಾಮಕ್ಕೆ ಹೋಗಿ ಬರಲು, ವಾಹನಗಳು ಓಡಾಡಲು ರಸ್ತೆಯ ಅವಶ್ಯಕತೆ ಇದೆ. ಇದರಿಂದ ರಸ್ತೆಯ ಎರಡೂ ಬದಿಯಲ್ಲಿ ಅವಶ್ಯಕತೆಗೆ ಅನುಗುಣವಾಗಿ ಜಾಗ ಗುರುತಿಸಿ ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುವಂತೆ ತಹಸೀಲ್ದಾರ್ ಶಿವಮೂರ್ತಿಗೆ ಶಾಸಕರು ನಿರ್ದೇಶನ ನೀಡಿದರು.