ಮಂಡ್ಯ: ಬೆಳ್ಳಂ ಬೆಳಗ್ಗೆ ಮದ್ದೂರು ಪಟ್ಟಣದಲ್ಲಿ ಜೆಡಿಎಸ್ ಮುಖಂಡ ಅಪ್ಪು ಪಿ ಗೌಡ ಅವರ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿ ಕೊಲೆಯತ್ನ ಮಾಡಿರುವ ಘಟನೆ ಜರುಗಿದೆ. ಮದ್ದೂರು ಪಟ್ಟಣದ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಅಪ್ಪು ಪಿ ಗೌಡ ಅವರು ದೇವಾಲಯದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ 4 ರಿಂದ 5 ಮಂದಿ ದುಷ್ಕರ್ಮಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.
ಈ ವೇಳೆ ಅಪ್ಪು ಅವರಿಗೆ ಕತ್ತು, ಹೊಟ್ಟೆ, ಕೈ ಹಾಗೂ ಬೆನ್ನಿನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದೇ ವೇಳೆ, ಪೂಜೆಗೆ ಆಗಮಿಸಿದ್ದ ಹೆಡ್ ಕಾನ್ಸ್ಟೇಬಲ್ ಕುಮಾರಸ್ವಾಮಿ ಹಾಗೂ ಭಕ್ತರು ದುಷ್ಕರ್ಮಿಗಳನ್ನು ಹಿಮ್ಮೆಟ್ಟಿಸಿದ್ದಾರೆ. ಹೀಗಾಗಿ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಕ್ಷಣವೇ ತೀವ್ರವಾಗಿ ಗಾಯಗೊಂಡಿದ್ದ ಗಾಯಾಳುವನ್ನು ಸ್ಥಳದಲ್ಲಿದ್ದ ಪೊಲೀಸರು ಹಾಗೂ ಭಕ್ತರು ಮದ್ದೂರು ಮೆಡಿಕಲ್ ಸೆಂಟರ್ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಅಷ್ಟೇ ಅಲ್ಲ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಅಪ್ಪುಗೌಡಗೆ ಅವರ ಬಿಜಿನೆಸ್ ಪಾರ್ಟ್ನರ್ ಜೊತೆಗೆ ಇತ್ತೀಚೆಗಷ್ಟೇ ಮನಸ್ತಾಪವಾಗಿ ದೂರಾಗಿದ್ರು. ಜೊತೆಗೆ ಅವರ ವಿರುದ್ಧ ಚೆಕ್ ಬೌನ್ಸ್ ಕೇಸ್ ಕೂಡ ದಾಖಲಿಸಿದ್ರು. ಇದರಿಂದ ಕುಪಿತಗೊಂಡ ಬಿಜಿನೆಸ್ ಪಾರ್ಟನರ್, ಪರಪ್ಪನ ಅಗ್ರಹಾರ ಜೈಲಲ್ಲಿರೋ ತನ್ನ ಸ್ನೇಹಿತ ಜಗದೀಶ್ಗೆ ಸುಫಾರಿ ಕೊಟ್ಟಿದ್ದರು. ಅದರಂತೆ ಜಗದೀಶ್ ತನ್ನ ಸಹಚರರಿಗೆ ಕೊಲೆ ಮಾಡಲು ಸೂಚಿಸಿದ್ದ. ಈ ಹಿನ್ನೆಲೆ ಅಪ್ಪುಗೌಡ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಅವರು ಅಟ್ಯಾಕ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಅಪ್ಪುಗೌಡ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾಳಿ ಬಳಿಕ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳನ್ನು ಮತ್ತು ಸುಫಾರಿ ನೀಡಿದ ಹಳೆಯ ಬಿಜಿನೆಸ್ ಪಾರ್ಟನರ್ನನ್ನು ಕೂಡ ಬಂಧಿಸಿದ್ದಾಗಿ ಎಸ್ಪಿ ಎನ್.ಯತೀಶ್ ಮಾಹಿತಿ ನೀಡಿದ್ದಾರೆ.
ಆತಂಕಗೊಂಡ ಭಕ್ತರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರತಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದರಿಂದ ಈ ಘಟನೆಯಿಂದ ಭಕ್ತರು ಕೆಲಕಾಲ ಆತಂಕಕ್ಕೆ ಒಳಗಾದರು. ಸ್ಥಳಕ್ಕೆ ಮದ್ದೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಮುಂದಿನ ತನಿಖೆ ಕೈಗೊಂಡಿದ್ದಾರೆ. ಇಡೀ ಕೃತ್ಯದ ಘಟನಾವಳಿಗಳು ದೇವಾಲಯದ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅವುಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಪ್ರಾಥಮಿಕ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ. ಸಂಪೂರ್ಣ ತನಿಖೆ ಬಳಿಕ ಈ ದಾಳಿಗೆ ಕಾರಣ ಏನು ಎಂಬುದು ಗೊತ್ತಾಗಲಿದೆ.
ಇದನ್ನೂ ಓದಿ: Watch Video: ಬೆಂಗಳೂರಲ್ಲಿ ಹಾಡಹಗಲೇ ಮಾರಕಾಸ್ತ್ರ ತೋರಿಸಿ ಸುಲಿಗೆ!