ಮಂಡ್ಯ/ಮಳವಳ್ಳಿ : ತಾಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಆನೆ ಮರಿಯೊಂದು ನೀರು ಕುಡಿಯಲು ಬಂದು ನೀರಿನ ತೊಟ್ಟಿಗೆ ಬಿದ್ದು ಹೊರ ಬರಲು ಪರದಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಇಲ್ಲಿನ ಮಣಿಗಾರನಕಟ್ಟೆ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳಿಗೆ ನೀರು ಕುಡಿಯಲು ತೊಟ್ಟಿ ಕಟ್ಟಿದ್ದಾರೆ. ಇಲ್ಲಿನ ನೀರು ಕುಡಿಯಲು ಬಂದ ಆನೆಮರಿ ತೊಟ್ಟಿಗೆ ಬಿದ್ದಿದೆ. ಬಳಿಕ ಮೇಲೆ ಏಳಲು ಸಾಧ್ಯವಾಗದೆ ಪರದಾಡುತಿತ್ತು. ಈ ವೇಳೆ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೋಡಿದಾಗ ನೀರಿನ ತೊಟ್ಟಿಯಲ್ಲಿ ಮರಿಯಾನೆ ಬಿದ್ದಿರುವುದು ಕಂಡು ಬಂದಿದೆ.
ಆನೆ ಮರಿಯನ್ನು ತೊಟ್ಟಿಯಿಂದ ಮೇಲೆತ್ತಲು ಇತರ ಕಾಡಾನೆಗಳು ಪ್ರಯತ್ನಿಸುತ್ತಿದ್ದವು. ನಂತರ ಅರಣ್ಯ ಸಿಬ್ಬಂದಿ ಜೆಸಿಬಿ ಮೂಲಕ ನೀರಿನ ತೊಟ್ಟಿಯ ಒಂದು ಭಾಗದ ಕಟ್ಟೆಯನ್ನು ಒಡೆದು ಆನೆ ಮರಿಯನ್ನು ರಕ್ಷಿಸಿ ಕಾಡಿಗೆ ಬಿಟ್ಟರು.