ಮಂಡ್ಯ: ಮೈಕ್ ಮುಂದೆ ಟವಲ್ ಹಾಕೊಂಡು ಅಳಬೇಕೆ ಎಂದು ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಅಂಬರೀಶ್ ಪುತ್ರ ಅಭಿಷೇಕ್ ತಿರುಗೇಟು ನೀಡಿದ್ದಾರೆ.
ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಅಭಿಷೇಕ್ ಭಾಷಣದ ವೇಳೆ ಈ ರೀತಿಯಾಗಿ ತಿರುಗೇಟು ನೀಡಿದ್ದು, ಮುಖದಲ್ಲಿ ನೋವು ಕಾಡ್ತಿಲ್ಲ ಅಂತಾರೆ. ಮೈಕ್ ಮುಂದೆ ಟವಲ್ ಹಾಕೊಂಡು ಅಳಬೇಕೆ? ನಾವು ಅಂಗೆಲ್ಲ ಅಳಲ್ಲ. ನೀವುರುವಾಗ ನಾವೇಕೆ ಅಳಬೇಕು, ಸ್ಟ್ರೈಟ್ ಫೈಟ್ನಲ್ಲಿ ಗೆಲ್ಲೋದಕ್ಕೆ ಆಗಲ್ಲ ಅಂತ ಅರ್ಥ ಆಗಿದೆ. ಅದಕ್ಕಾಗಿ ಮೂರು ಜನ ಸುಮಲತಾ ಅವರನ್ನು ನಿಲ್ಲಿಸಿದ್ದಾರೆ ಅಂತ ವ್ಯಂಗ್ಯವಾಗಿ ನಕ್ಕ ಅಭಿಷೇಕ್, ಏನೇನೋ ಗಿಮಿಕ್ಗಳನ್ನ ಮಾಡುತ್ತಿದ್ದಾರೆ. ನಾವು ದಡ್ಡರಲ್ಲ ಅಂತ ಏಪ್ರಿಲ್ 18ಕ್ಕೆ ತೋರಿಸೋಣ. ನಾವು ದುಡ್ಡು ಖರ್ಚು ಮಾಡ್ತೀವಂತೆ. ನಾವು ದುಡ್ಡು ಹಂಚಲ್ಲ. ಪ್ರೀತಿ ಹಂಚುತ್ತೇವೆ ಎಂದು ತಿರುಗೇಟು ನೀಡಿದರು.
ಅವರು ಏನೇನೋ ನಾಟಕ ಆಡ್ತಿದ್ದಾರೆ. ಅದೆಲ್ಲಾನೂ ನಿಮ್ಮ ಗಮನಕ್ಕೆ ತಗೋಬೇಕು. ಹೆಸರು, ಚಿನ್ಹೆಯನ್ನ ಗಮನಕ್ಕೆ ತಂದುಕೊಂಡು ವೋಟ್ ಮಾಡಬೇಕು. ಸ್ತ್ರೀ ಶಕ್ತಿ ಏನು ಅಂತ ಅವರಿಗೆ ನೀವು ತೋರಿಸಬೇಕು. ಮಂಡ್ಯ ಸ್ವಾಭಿಮಾನವನ್ನು ನೀವೇ ಕಾಪಾಡಬೇಕು. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಾನು ನಿನ್ನೆ, ಮೊನ್ನೆ ಬಂದಿಲ್ಲ. ಇಲ್ಲಿಯವರನ್ನ ಮದುವೆ ಆಗಿ ಮಂಡ್ಯದವನು ಆಗಬೇಕಾದ ಅವಶ್ಯಕತೆ ಇಲ್ಲ. ನಾನು ಮಂಡ್ಯದ ಅಳಿಯ ಅಲ್ಲ. ನಾನು ಮಂಡ್ಯದ ಮಗ ಎಂದು ಸ್ನೇಹಿತ, ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದರು.
ಮೈತ್ರಿ ಅಭ್ಯರ್ಥಿಗೆ ವೋಟ್ ಹಾಕಿದ್ರೆ ಅಂಬರೀಶಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತಂತೆ. ಇದು ಏನ್ ಲೆಕ್ಕಾಚಾರ ಅಂತಾನೆ ಗೊತ್ತಾಗುತ್ತಿಲ್ಲ. ಅವರು ಹೇಳಿದ್ರು ಅಂತ ನೀವು ನಂಬುತ್ತೀರಾ. ಅವರು ಇಷ್ಟ ಬಂದ ಹಾಗೆ ಮಾತಾಡಿಕೊಳ್ಳುತ್ತಾರೆ, ಆರೋಪ ಮಾಡಿಕೊಳ್ಳಲಿ. ಅದನ್ನ ನೀವು ನಂಬಬೇಡಿ. ನಮ್ಮ ತಾಯಿಗೆ ಆಶೀರ್ವಾದ ಮಾಡಿ, ನಮಗೊಂದು ಅವಕಾಶ ಕೊಡಿ ಎಂದು ಮನವಿ ಮಾಡಿದರು.