ಮಂಡ್ಯ: ಅಣ್ಣನೊಬ್ಬ ಕುಡಿದ ಅಮಲಿನಲ್ಲಿ ಕಲ್ಲಿನಿಂದ ತಮ್ಮನನ್ನೇ ಹತ್ಯೆ ಮಾಡಿರುವ ಘಟನೆ ಮಂಡ್ಯ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಭಿಷೇಕ್ (24) ಮತ್ತು ಚಂದನ್ (22) ಇಬ್ಬರೂ ಸಹೋದರರಾಗಿದ್ದು, ಇಬ್ಬರೂ ಕುಡಿತಕ್ಕೆ ದಾಸರಾಗಿದ್ದರು.
ಸೋಮವಾರ ರಾತ್ರಿ 7.30 ವೇಳೆ ಅಣ್ತಮ್ಮಂದಿರು ಇಬ್ಬರು ಕುಡಿದಿದ್ದು, ಬಳಿಕ ಇಬ್ಬರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ಸಹೋದರರ ಜಗಳ ಪೋಷಕರು ಜತೆ ಗ್ರಾಮಸ್ಥರು ಬಿಡಿಸಲು ಮುಂದಾಗಿದ್ರೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಇವರಿಬ್ಬರ ಜಗಳ ವಿಕೋಪಕ್ಕೆ ತಿರುಗಿದ್ದು, ಕುಡಿದ ಮತ್ತಿನಲ್ಲಿದ್ದ ಅಣ್ಣ ಅಭಿಷೇಕ್ ಕಲ್ಲಿನಿಂದ ತಮ್ಮ ಚಂದನ್ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ಕೆಳಗೆ ಬಿದ್ದ ಚಂದನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ತಮ್ಮ ಮೃತಪಟ್ಟ ವಿಷಯ ತಿಳಿಯುತ್ತಿದ್ದಂತೆ ಅಣ್ಣ ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸುದ್ದಿಯನ್ನು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಕೈಗೊಂಡರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.