ಮಂಡ್ಯ: ಕಾವೇರಿ ಪ್ರಾಧಿಕಾರದ ಮುಂದೆ ನೀರಿನ ಕೊರತೆ ಬಗ್ಗೆ ಹೇಳಿದ್ದೇವೆ. ಶೀಘ್ರದಲ್ಲೇ ಸಭೆ ನಡೆಯಲಿದೆ. ಅಲ್ಲಿಯೂ ಸಮರ್ಥ ವಾದ ಮಾಡಲಿದ್ದೇವೆ. ಸಮಿತಿಯ ಆದೇಶ ವಾಪಸ್ ಪಡೆಯಲು ಆಗ್ರಹಿಸುತ್ತೇವೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ನಮ್ಮಲ್ಲಿ ಬೆಳೆ ಹಾಳಾಗುತ್ತಿವೆ. ಮಳೆ ಬರದಿದ್ದರೆ ಕುಡಿಯುವ ನೀರಿಗೂ ತೊಂದರೆ ಆಗಲಿದೆ. ಸುಪ್ರೀಂ ಕೋರ್ಟ್ ಮುಂದೆ ಹೋಗಲು ನಾವು ತಯಾರಿದ್ದೇವೆ. ಕೋರ್ಟಿಗೂ ವಾಸ್ತವ ಸ್ಥಿತಿ ಮನವರಿಕೆ ಮಾಡಲಿದ್ದೇವೆ. ಪ್ರಾಧಿಕಾರದ ಆದೇಶವನ್ನು ಗಮದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್‌ಗೆ ಹೋಗ್ತೇವೆ ಎಂದು ಹೇಳಿದರು.
ಪ್ರಾಧಿಕಾರ ವಾಸ್ತವ ಸ್ಥಿತಿಗತಿ ಗಮನಿಸಿ ಆದೇಶ ನೀಡುವ ವಿಶ್ವಾಸವಿದೆ. ಮುಂದಿನ ವಾರದಲ್ಲಿ ಮಳೆ ಬರುವ ಸಾಧ್ಯತೆ ಇದೆ. ಆಗ 10-12 ಟಿಎಂಸಿ ನೀರು ಶೇಖರಣೆಯಾದರೆ ಎಲ್ಲರಿಗೂ ಒಳ್ಳೆಯದಾಗಲಿದೆ. ಕಷ್ಟ ಹೇಳಿಕೊಳ್ಳಬಹುದು. ಆದರೆ, ಸರ್ವೋಚ್ಚ ನ್ಯಾಯಾಲಯದ ಆದೇಶ ತಿರಸ್ಕರಿಸಲಾಗದು. ನೀರಿಲ್ಲ ಎನ್ನಬಹುದು. ಬಿಡಲ್ಲ ಎನ್ನಲಾಗಲ್ಲ. ನಮ್ಮ ರೈತರಿಗೆ ಒಳಿತಾಗಲೂ ನಾವು ಎಲ್ಲದಕ್ಕೂ ಸಿದ್ದರಿದ್ದೇವೆ ಎಂದರು.
ಮಳೆ ಕೊರತೆ ವಿಚಾರದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅನುಭವಸ್ಥರು, ಮುಂಚೆ ಹೇಳಿದಿದ್ದರೆ ಸಲಹೆ ತೆಗೆದುಕೊಳ್ತಿದ್ದೆವು. ಮುಂದಿನ ಬಾರಿ ಅವರ ಸಲಹೆ ತೆಗೆದುಕೊಳ್ತೇವೆ. ಕೇಂದ್ರ ಸರ್ಕಾರ ಅವ್ರದ್ದೇ ಇದೆ. ನಿನ್ನೆ ನಡೆದ ಸರ್ವ ಪಕ್ಷ ಸಭೆಗೆ ಬಂದಿಲ್ಲ. ಏನರ್ಥ?. ವಾಸ್ತವ ಸತ್ಯ ಚರ್ಚೆಗೆ ಅವರು ರೆಡಿ ಇಲ್ಲ. ಹಾಗಾಗಿ ಅವರು ಪಾದಯಾತ್ರೆ ಮಾಡಿದ್ರೆ ಪ್ರಯೋಜನವಿಲ್ಲ ಎಂದು ಹೇಳಿದರು.
ಮೋದಿ ಬೆಂಗಳೂರಿಗೆ ಬಂದಾಗ ಅವರಿಗೆ ಟಾಟಾನೂ ಮಾಡಿಲ್ಲ. ಬಿಜೆಪಿ ಅವರಿಗೆ ಮೋದಿ ಕಂಡರೆ ಭಯ ಇದೆ. ಭೇಟಿಗೆ ಅವಕಾಶ ಕೊಡ್ತಾರೋ ಇಲ್ವೋ ಅಂತ. ಹಾಗಾಗಿ ಮೋದಿ ಬಳಿ ನಿಯೋಗ ಕರೆದೊಯ್ಯಲು ಅವರಿಗೆ ಆಗ್ತಿಲ್ಲ. 161 ತಾಲೂಕು ಬರ ತಾಲೂಕು ಘೋಷಣೆ ಮಾಡಲಾಗಿದೆ. ಸಂಪೂರ್ಣ ಮಾಹಿತಿ ಕಲೆಹಾಕಿ, ಕೇಂದ್ರ ಸರ್ಕಾರದ ಗೈಡ್‌ಲೈನ್ಸ್ ಪ್ರಕಾರ ಘೋಷಣೆ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಲಿದ್ದೇವೆ. ಬರ ತಾಲೂಕುಗಳಲ್ಲಿ ಅಧ್ಯಯನ ನಡೆಸಲಿದ್ದೇವೆ ಎಂದರು.
ಕಳೆದ 40-50 ವರ್ಷದಲ್ಲಿ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡದಿರುವುದು ಇದೇ ಮೊದಲು. ಬಿಜೆಪಿಯವರಿಗೆ ಎಂತಹ ಪರಿಸ್ಥಿತಿ ಬಂದಿದೆ. ಅವರಿಗೆ ನಾಯಕತ್ವ, ಒಗ್ಗಟ್ಟು ಇಲ್ಲ. ಅನಿವಾರ್ಯವಾಗಿ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. ಪಕ್ಷದ ಅಸ್ತಿತ್ವಕ್ಕಾಗಿ ಜೆಡಿಎಸ್ ಕೂಡ ಬಿಜೆಪಿ ಜೊತೆ ಹೋಗ್ತಿದೆ. ಜೆಡಿಎಸ್‌ಗೆ ಬಿಜೆಪಿ ಬಿಜೆಪಿಗೆ ಜೆಡಿಎಸ್ ಅನಿವಾರ್ಯವಾಗಿದೆ ಎಂದರು.
ಸುಮಲತಾ ಈಗ ಅತಂತ್ರದಲ್ಲಿ ಇದ್ದಾರೋ ಇಲ್ವೋ ಅವರನ್ನು ಕೇಳಿ. ಅವರು ಜೆಡಿಎಸ್ ಅಪ್ಪಿಕೊಂಡಿದ್ದಾರೋ, ಬಿಜೆಪಿ ಜೊತೆ ಇದ್ದಾರೋ ನನಗೆ ಗೊತ್ತಿಲ್ಲ. ಪಾಪ ಅವರು ಕೇಂದ್ರದಲ್ಲಿ ಮೋದಿ, ಅಮಿತ್ ಶಾ ಜೊತೆ ಚೆನ್ನಾಗಿದ್ದಾರೆ. ಜಿಲ್ಲೆಗೆ ಅನುಕೂಲವಾಗಲಿ ಎಂದು ಬಿಜೆಪಿಗೆ ಬೆಂಬಲ ಕೊಟ್ಟಿದ್ದಾರೆ. ಕಾವೇರಿ ವಿಚಾರದಲ್ಲಿ ಹೋಗಿ ಮಾತಾಡಬೇಕು. ಅದರ ಬದಲು ನಮ್ಮನ್ನು ಡ್ಯಾಂ ಬಳಿ ಹೋಗಿಲ್ಲ ಅಂತಾರೆ. ಡ್ಯಾಂನಲ್ಲಿ ನೀರು ಎಷ್ಟು ಇದೆ ಅಂತಾ ನಮಗೆ ತಿಳಿದುಕೊಳ್ಳಲು ಗೊತ್ತಿಲ್ವಾ. ಡ್ಯಾಂ ಬಳಿ ಉಸ್ತುವಾರಿ, ನೀರಾವರಿ ಸಚಿವರು ಹೋಗಿಲ್ಲ ಅಂತಾರೆ. ಮೊದಲು ಮೇಡಂ ಅಮಿತ್ ಶಾ ಬಳಿ ಹೋದರೆ ಸಂತೋಷ.
ಮೇಡಂ ಬಗ್ಗೆ ನಮಗೆ ಯಾವುದೇ ಹಸ್ತಕ್ಷೇಪ ಇಲ್ಲ. ಚುನಾವಣೆ ಆದಾಗಿನಿಂದ ಅವರ ನಿಲುವಿಗೆ ಅವರೇ ಸಮರ್ಥರು. ಅವರು ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಲಿ. ನಮಗೂ ಅದಕ್ಕೂ ಸಂಬಂಧ ಇಲ್ಲ. ಅವರು ಬಿಜೆಪಿ ಜೊತೆ ಹೋಗ್ತಾರೋ, ಜೆಡಿಎಸ್ ಜೊತೆ ಹೋಗ್ತಾರೋ, ಪಕ್ಷೇತರವಾಗಿ ಇರ್ತಾರೋ ಅವರಿಗೆ ಬಿಟ್ಟಿದ್ದು ಎಂದು ಟಾಂಗ್ ನೀಡಿದರು.
ಇದೇ ವೇಳೆ ಬಿ.ಕೆ.ಹರಿಪ್ರಸಾದ್ ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಹರಿಪ್ರಸಾದರ ಹೇಳಿಕೆಯನ್ನು ಇಡೀ ಪಕ್ಷ ಖಂಡಿಸಿದೆ. ಮಲ್ಲಿಕಾರ್ಜುನ್ ಖರ್ಗೆ ಅವರೂ ಹೇಳಿದ್ದಾರೆ, ಅವರಿಗೆ ನೊಟೀಸ್ ಸಹ ಬಂದಿದೆ. ರಾಜ್ಯ ಕಾಂಗ್ರೆಸ್‌ನ ಹಲವು ಅಧಿಕಾರವನ್ನು ಹರಿಪ್ರಸಾದ್ ಅನುಭವಿಸಿದ್ದಾರೆ. ಸಿದ್ದರಾಮಯ್ಯರ ಬಗ್ಗೆ ಮಾತಾನಾಡಿರೋದು ಪಕ್ಷಕ್ಕೆ ಅಗೌರವ ತಂದಿದೆ. ಇನ್ನು ಮುಂದೆ ಹೀಗೆ ಮಾತನಾಡಲ್ಲ ಅಂದುಕೊಂಡಿದ್ದೇನೆ ಎಂದರು.
ಇದನ್ನೂ ಓದಿ: ರೈತರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಎನ್. ಚಲುವರಾಯಸ್ವಾಮಿ