ಮಂಡ್ಯ: ಸಕ್ಕರೆ ನಾಡಿನಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ರೆಬೆಲ್ ಲೇಡಿ ಸುಮಲತಾ ಅಂಬರೀಶ್ ಸಮರ ಸಾರಿದ್ದರು. ರಾಜ್ಯ ಸರ್ಕಾರದ ಗಮನ ಸೆಳೆಯುವ ಜೊತೆಗೆ ದೆಹಲಿ ಮಟ್ಟಕ್ಕೂ ತಮ್ಮ ಹೋರಾಟ ಕೊಂಡೊಯ್ದಿದ್ರು. ಇದಾದ ಬಳಿಕ ಅಲರ್ಟ್ ಆಗಿರುವ ಮಂಡ್ಯ ಜಿಲ್ಲಾಡಳಿತ 44 ಗಣಿ ಕಂಪನಿಗಳ ಲೈಸೆನ್ಸ್ ರದ್ದು ಮಾಡಿದೆ.
![33 stone crushers License cancelled in mandya](https://etvbharatimages.akamaized.net/etvbharat/prod-images/12720313_thumbnail.jpg)
ಎಚ್ಚೆತ್ತುಕೊಂಡ ಮಂಡ್ಯ ಜಿಲ್ಲಾಡಳಿತ:
ಮಂಡ್ಯದಲ್ಲಿ ಕೆಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆ ಧೂಳು ಹೆಚ್ಚಾಗಿತ್ತು. ಅದ್ರಲ್ಲೂ ಕೆಆರ್ಎಸ್ ಡ್ಯಾಂ ಸುತ್ತಮತ್ತ ಭಾರಿ ಪ್ರಮಾಣದ ಸ್ಫೋಟಕ ಬಳಸಿ ನಡೆಸುತ್ತಿದ್ದ ಗಣಿಗಾರಿಕೆಯಿಂದ ಐತಿಹಾಸಿಕ ಅಣೆಕಟ್ಟೆಗೆ ಅಪಾಯವಿದೆ ಭೀತಿ ಆತಂಕ ಎದುರಾಗಿತ್ತು. ಈ ಹಿನ್ನೆಲೆ ಇತ್ತೀಚೆಗಷ್ಟೇ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಸಂಸದೆ ಸುಮಲತಾ ಅಂಬರೀಶ್ ಹೋರಾಟ ಆರಂಭಿಸಿದ್ರು. ಇದೀಗ ಎಚ್ಚೆತ್ತುಕೊಂಡಿರುವ ಮಂಡ್ಯ ಜಿಲ್ಲಾಡಳಿತ 11 ಕಲ್ಲು ಕ್ವಾರಿ, 33 ಕ್ರಷರ್ಗಳ ಲೈಸೆನ್ಸ್ ರದ್ದು ಮಾಡಿದೆ.
ಗೃಹ ಸಚಿವ ಅಮಿತ್ ಶಾಗೆ ಮನವಿ:
ಇದೀಗ ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ದೆಹಲಿಯಲ್ಲಿರುವ ಸಂಸದೆ ಸುಮಲತಾ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರನ್ನು ಭೇಟಿ ಮಾಡಿ ಮಂಡ್ಯ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ KRS ಡ್ಯಾಂಗೆ ಎದುರಾಗಿರುವ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ರು.
33 ಕ್ರಷರ್ ಲೈಸೆನ್ಸ್ ರದ್ದು:
ಯಾವಾಗ ಸುಮಲತಾ ಅಂಬರೀಶ್ ಕೇಂದ್ರ ಸರ್ಕಾರದ ಗಮನ ಸೆಳೆಯಲು ಆರಂಭಿಸಿದ್ರೋ ಆ ಬಳಿಕ ಮಂಡ್ಯ ಜಿಲ್ಲಾಡಳಿತ ಫುಲ್ ಅಲರ್ಟ್ ಆಗಿದ್ದು, ಪರವಾನಗಿ ರಿನಿವಲ್ ಮಾಡಿಕೊಳ್ಳದ 11 ಕಲ್ಲು ಕ್ವಾರಿ, ಸಿ ಫಾರಂ ಹೊಂದದ 33 ಕ್ರಷರ್ ಲೈಸೆನ್ಸ್ ರದ್ದುಪಡಿಸಿದೆ. ಲೈಸೆನ್ಸ್ ರದ್ದುಗೊಂಡಿರುವ 33 ಕ್ರಷರ್ಗಳ ಪೈಕಿ 11 ಬೇಬಿ ಬೆಟ್ಟದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಕ್ರಷರ್ಗಳಾಗಿವೆ.
11 ಚೆಕ್ಪೋಸ್ಟ್ ರಚನೆ:
ಅಕ್ರಮ ಗಣಿಗಾರಿಕೆ ತಡೆಗೆ ಕಂದಾಯ, ಅರಣ್ಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನೊಳಗೊಂಡ ಚಾಲಿತ ದಳ ರಚನೆ ಮಾಡಲಾಗಿದೆ. ಪಾಂಡವಪುರ, ಶ್ರೀರಂಗಪಟ್ಟಣ ಹಾಗೂ ನಾಗಮಂಗಲ ತಾಲೂಕಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಹಾಗೂ ಸಾಗಾಣಿಕೆ ಮೇಲೆ ನಿಗಾ ವಹಿಸಲಾಗಿದೆ. ಜಿಲ್ಲೆಯಾದ್ಯಂತ 11 ಚೆಕ್ ಪೋಸ್ಟ್ ರಚನೆ ಮಾಡಲಾಗಿದೆ. ಏಪ್ರಿಲ್ನಿಂದ ಇಲ್ಲಿವರೆಗೆ 12 ಪ್ರಕರಣ ದಾಖಲಿಸಲಾಗಿದ್ದು, 119 ವಾಹನಗಳಿಂದ 33.73 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.
ಇತ್ತೀಚೆಗೆ ಸಂಸದೆ ಸುಮಲತಾ ಅವರು, ಅಕ್ರಮ ಗಣಿಗಾರಿಕೆಯಿಂದ ಕೆಆರ್ಎಸ್ ಡ್ಯಾಮ್ಗೆ ಅಪಾಯವಿದೆ. ಅಣೆಕಟ್ಟು ಬಿರುಕು ಬಿಟ್ಟಿದೆ ಎಂದು ಹೇಳಿದ್ದರು. ಈ ವಿಚಾರ ಮಾಜಿ ಸಿಎಂ ಹೆಚ್ಡಿಕೆ ಮತ್ತು ಸುಮಲತಾ ಅವರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿ, ರಾಜ್ಯಾದ್ಯಂತ ಸದ್ದು ಮಾಡಿತ್ತು.