ಗಂಗಾವತಿ: ಸರ್ಕಾರದ ನಾನಾ ಇಲಾಖೆಯ ಹಲವು ಯೋಜನೆಗಳಲ್ಲಿ ಗ್ರಾಮ, ವಾರ್ಡ್ಗಳಲ್ಲಿ ನಡೆಯುವ ಕಾಮಗಾರಿಗಳ ಗುಣಮಟ್ಟವನ್ನು ಆಯಾ ಪ್ರದೇಶದ ಯುವಕರು ನಿಗಾವಹಿಸಿ ಕಾಪಾಡಬೇಕು ಎಂದು ಶಾಸಕ ಬಸವರಾಜ ದಡೇಸುಗೂರು ಕರೆ ನೀಡಿದರು.
ಗಂಗಾವತಿ ಸಮೀಪದ ಹೇರೂರು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಎಸ್ಟಿಪಿ, ಎಸ್ಸಿಪಿ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಅಧಿಕಾರಿಗಳು, ಗುತ್ತಿಗೆದಾರರು ಶಾಮೀಲಾಗಿ ಕಳಪೆ ಕಾಮಗಾರಿಗಳನ್ನು ಮಾಡಿರುವ ಸಾಕಷ್ಟು ಉದಾಹರಣೆಗಳಿವೆ. ಈ ಹಿನ್ನೆಲೆ ನಿಮ್ಮ ಪ್ರದೇಶಕ್ಕೆ ಮಂಜೂರಾದ ಕಾಮಗಾರಿಗಳ ಸಂಪೂರ್ಣ ಮಾಹಿತಿ ಪಡೆದು ಗುಣಮಟ್ಟದಲ್ಲಿ ಕೆಲಸ ಮಾಡಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಕಾಮಗಾರಿಗಳಲ್ಲಿ ಏನಾದರೂ ಕಳಪೆ ಕಂಡುಬಂದಲ್ಲಿ ಗ್ರಾಮಗಳ ಯುವಕರು ತಕ್ಷಣ ಗಮನಕ್ಕೆ ತನ್ನಿ ಎಂದು ಮನವಿ ಮಾಡಿದರು.
ಇದಕ್ಕೂ ಮುನ್ನ ಕ್ಷೇತ್ರದ ನಾನಾ ಗ್ರಾಮಗಳಲ್ಲಿ ಕೈಗೊಳ್ಳುತ್ತಿರುವ ಎರಡೂವರೆ ಕೋಟಿ ರೂಪಾಯಿ ಮೊತ್ತದ ಕಾಮಗಾರಿಗೆ ಶಾಸಕರು ಚಾಲನೆ ನೀಡಿದರು.