ಕುಷ್ಟಗಿ (ಕೊಪ್ಪಳ): ರಭಸವಾಗಿ ಹರಿಯುತ್ತಿದ್ದ ನೀರಿನ ಸೆಳೆತಕ್ಕೆ ಬೈಕ್ ಸಮೇತ ಕೊಚ್ಚಿಹೋಗಿದ್ದ ಯುವಕನೊಬ್ಬ ಪ್ರಾಣಾಪಾಯದಿಂದ ಪಾರಾಗಿ ಬಂದ ಘಟನೆ ಕುಷ್ಟಗಿ ತಾಲೂಕಿನಲ್ಲಿ ನಡೆದಿದೆ. ಅಡವಿ ಗ್ರಾಮದ ನಿಂಗಪ್ಪ ಮಲ್ಲಪ್ಪ ಮಲ್ಕಾಪೂರ ಸಾವಿನ ದವಡೆಯಿಂದ ಪಾರಾಗಿ ಬಂದ ಯುವಕ.
ಇಂದು ಸುರಿದ ಭಾರಿ ಮಳೆಗೆ ಅಡವಿಬಾವಿ-ಹುಲ್ಸಗೇರಿ ಮಧ್ಯೆದ ಹಳ್ಳ ರಭಸವಾಗಿ ಹರಿಯುತ್ತಿತ್ತು. ಹನುಮಸಾಗರ ಸಂತೆಯಿಂದ ಬಂದ ಯುವಕನು ಗ್ರಾಮಕ್ಕೆ ವಾಪಸ್ ಆಗುತ್ತಿದ್ದಾಗ ಹಳ್ಳದ ಹರುವು ಹೆಚ್ಚಾಗಿತ್ತು. ಗೊತ್ತಾಗದೇ ಹಳ್ಳಕ್ಕೆ ಇಳಿದ ನಿಂಗಪ್ಪ, ಒಂದು ದಡದಿಂದ ಮತ್ತೊಂದು ದಡಕ್ಕೆ ದಾಟುತ್ತಿದ್ದಾಗ ಪ್ರವಾಹ ಸೆಳೆತಕ್ಕೆ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿದ್ದನು. ಪವಾಡ ಸದೃಶ ಎಂಬಂತೆ ಹೇಗೋ ಗಿಡದ ಬೇರಿನ ಆಸರೆಯಿಂದ ಯುವಕ ದಡ ಸೇರಿದ್ದಾನೆ. ಆದರೆ, ಬೈಕ್ ಮಾತ್ರ ಕೊಚ್ಚಿಕೊಂಡು ಹೋಗಿದೆ.
"ಈ ರೀತಿ ಹಳ್ಳ ತುಂಬಿ ಬಂದರೆ ಇದೇ ಪರಿಸ್ಥಿತಿ ಅನುಭವಿಸಬೇಕು. ಪ್ರವಾಹ ತಗ್ಗುವವರೆಗೂ ಕಾಯಲೇಬೇಕು. ಇಂದು ಸುಮಾರು 50ಕ್ಕೂ ಅಧಿಕ ಜನರಿದ್ದೇವೆ. ಒಂದು ದಡದಿಂದ ಮತ್ತೊಂದು ದಡಕ್ಕೆ ಬರಬೇಕೆಂದರೆ ಸುಮಾರು ಗಂಟೆಗಳ ಕಾಲ ಕಾಯಬೇಕಾಯಿತು. ಸೇತುವೆ ಇಲ್ಲವೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಿಸುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ" ಎಂದು ಸ್ಥಳೀಯರು ತಮ್ಮ ನೋವು ತೋಡಿಕೊಂಡಿದ್ದಾರೆ.