ಕೊಪ್ಪಳ : ದೇಶದ ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ವ್ಯವಸ್ಥೆಯ ಕೈಗಿಡುವ ಹುನ್ನಾರದ ಹಿನ್ನೆಲೆ ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ ಎಂ ವೀರಸಂಗಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೃಷಿ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ವಿರೋಧಿಸಿ ರಾಷ್ಟ್ರ ರಾಜಧಾನಿಯಲ್ಲಿ ಲಕ್ಷಾಂತರ ರೈತರು 114 ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇಶದ ಕೃಷಿ ಹಾಗೂ ಕೃಷಿಕರಿಗೆ ಆತಂಕದ ಕಾನೂನುಗಳನ್ನು ಜಾರಿ ಮಾಡುತ್ತಿವೆ. ದೇಶದ 70 ಕೋಟಿ ಜನರು ಕೃಷಿ ಅವಲಂಬನೆಯಾಗಿದ್ದಾರೆ. ಕೃಷಿ ನಾಶ ಮಾಡುವ ಉದ್ದೇಶದಿಂದ ಮೋದಿ ಸರ್ಕಾರ ಈ ಕಾನೂನುಗಳನ್ನು ಜಾರಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
70ರ ದಶಕದಲ್ಲಿ ದೇಶ ಬೇಡುವ ದೇಶವಾಗಿತ್ತು. 2000 ಇಸ್ವಿ ವೇಳೆಗೆ ನೀಡುವ ದೇಶವಾಗಿ ಬದಲಾಗಿದೆ. ಉತ್ಪಾದನೆಯಲ್ಲಿ ರೈತರು ಹಿಂದೆ ಬಿದ್ದಿಲ್ಲ. ದೇಶದ ಮಾರುಕಟ್ಟೆ ವ್ಯವಸ್ಥೆಯಿಂದ ರೈತರು ಹೆಚ್ಚು ಸಾಲಗಾರರಾಗಿದ್ದಾರೆ. ದೇಶದಲ್ಲಿ ಕೇವಲ 5 ಸಾವಿರ ಎಪಿಎಂಸಿಗಳಿವೆ.
45 ಸಾವಿರ ಎಪಿಎಂಸಿ ಬೇಕು ಹಾಗೂ ಅವುಗಳನ್ನು ಬಲಪಡಿಸುವ ಕುರಿತಂತೆ ಸರ್ಕಾರ ಯೋಚಿಸಿ ಮುಂದಾಗಬೇಕಿತ್ತು. ಆದರೆ, ಎಪಿಎಂಸಿ ವ್ಯವಸ್ಥೆಯನ್ನು ನಾಶಪಡಿಸುವ ಉದ್ದೇಶದಿಂದ ಸರ್ಕಾರ ಕಾನೂನು ಮಾಡಿದೆ. ರಾಜ್ಯದಲ್ಲಿ 424 ಎಪಿಎಂಸಿಗಳಿದ್ದು, 5787 ಎಕರೆ ಭೂಮಿ, ಕಟ್ಟಡ ಕಚೇರಿ ಸೇರಿ 7 ರಿಂದ 8 ಲಕ್ಷ ಕೋಟಿ ಆಸ್ತಿ ಇದೆ. ಇದನ್ನು ಸರ್ಕಾರ ಮಾರಿಕೊಂಡು ಹೋಗುವ ಹುನ್ನಾರವಿದೆ ಎಂದಿದ್ದಾರೆ.
87 ಲಕ್ಷ ರೈತ ಕುಟುಂಬಗಳು ರಾಜ್ಯದಲ್ಲಿವೆ. 67 ಲಕ್ಷ ಸಣ್ಣ ರೈತ ಕುಟುಂಬಗಳಿವೆ. ಕೇಂದ್ರ ಸರ್ಕಾರ ಕಳ್ಳಸಂತೆ ಮಾರುಕಟ್ಟೆ ಸೃಷ್ಟಿ ಮಾಡಿ ಜನರಿಗೆ ಸಂಕಷ್ಟ ತಂದೊಡ್ಡಲಿದೆ. ನಾವು ಸರ್ಕಾರದ ವಿರುದ್ಧ ಮುಖಾಮುಖಿಯಾಗಿ ಹೋರಾಟ ಮಾಡುತ್ತಿದ್ದೇವೆ. ಇದು ಕೇವಲ ರೈತರ ಹೋರಾಟವಲ್ಲ ಇದು ಸಮಗ್ರ ದೇಶದ ಜನರ ಹೋರಾಟ.
52 ಸಂಘಟನೆಗಳು ಸೇರಿ ಮಾರ್ಚ್ 22ರಂದು ಬೆಂಗಳೂರಿನಲ್ಲಿ ಬೃಹತ್ ಹೋರಾಟ ನಡೆಯಲಿದೆ. ಸುಮಾರು 50 ಸಾವಿರಕ್ಕಿಂತಲೂ ಹೆಚ್ಚು ಜನರು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯಿಂದ ಜನರು ತೊಂದರೆಗೊಳಗಾಗಿದ್ದಾರೆ. ಈ ಕಾಯ್ದೆಯ ಹಿಂದೆ ದೊಡ್ಡ ಹುನ್ನಾರವಿದೆ ಎಂದು ಆರೋಪಿಸಿದ್ದಾರೆ.