ಕೊಪ್ಪಳ: ಓರ್ವ ಮಹಿಳೆ ಸ್ವಾವಲಂಬಿಯಾದರೆ ಆ ಕುಟುಂಬ ಸುಖ, ನೆಮ್ಮದಿಯಿಂದ ಹಾಗೂ ಆರ್ಥಿಕವಾಗಿ ಮುಂದೆ ಬರುವುದಕ್ಕೆ ಸಹಾಯವಾಗುತ್ತದೆ. ಮಹಿಳೆಯರು ತಮ್ಮ ದೈನಂದಿನ ಕೆಲಸವನ್ನು ಮುಗಿಸಿದ ಬಳಿಕ ದುಡಿಮೆಯಲ್ಲಿ ತೊಡಗಿಕೊಳ್ಳುತ್ತಾರೆ. ಮನೆಯ ಪುರುಷರ ದುಡಿಮೆ ಜೊತೆಗೆ ತಮ್ಮ ದುಡಿಮೆ ಸೇರಿಸಿ ಕುಟುಂಬದ ಆರ್ಥಿಕ ಸ್ಥಿತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಒಂದು ಕುಟುಂಬದಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮಹಿಳೆಯರು ದುಡಿಯುತ್ತಿದ್ದಾರೆ. ಮಹಿಳೆಯರ ದುಡಿಮೆಗೆ ಸಹಾಯವಾಗುವ ಉದ್ದೇಶದಿಂದ ಮಹಿಳಾ ಸ್ವ-ಸಹಾಯ ಗುಂಪುಗಳು ಹುಟ್ಟಿಕೊಂಡಿವೆ. ರಾಜ್ಯ ಹಾಗೂ ಕೇಂದ್ರ ಸರ್ಕಾರವು ಸಹ ಸ್ವ-ಸಹಾಯ ಗುಂಪುಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಹೀಗೆ, ಪ್ರೋತ್ಸಾಹ ಪಡೆದುಕೊಂಡಿರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತ್ ಮಟ್ಟದಲ್ಲಿರುವ ದಿವ್ಯಜ್ಯೋತಿ ಸಂಜೀವಿನಿ ಮಹಿಳಾ ಒಕ್ಕೂಟ ಮಾದರಿಯಾಗುವಂತಹ ಕೆಲಸ ಮಾಡಿದೆ.
2015ರಲ್ಲಿ ದಿವ್ಯಜ್ಯೋತಿ ಸಂಜೀವಿನಿ ಗ್ರಾಮ ಪಂಚಾಯತ್ ಒಕ್ಕೂಟ ಕೇವಲ ಒಂದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಆರಂಭವಾಗಿದೆ. ಅವರಿಗೆ ಸಮುದಾಯ ಬಂಡವಾಳ ನಿಧಿಯಿಂದ 44.75 ಲಕ್ಷ ರೂಪಾಯಿ ಅನುದಾನ ನೀಡಲಾಗಿತ್ತು. ಮಂಗಳೂರು ಗ್ರಾಮ ಪಂಚಾಯತಿಯ 7 ವಾರ್ಡುಗಳಲ್ಲಿ ಈ ಮೊದಲು 45 ಸ್ವಸಹಾಯ ಗುಂಪುಗಳಿದ್ದವು. ಈಗ 71 ಸ್ವಸಹಾಯ ಗುಂಪುಗಳಾಗಿವೆ.
ಬಂಡವಾಳ ನಿಧಿ 1.48 ಕೋಟಿಗೆ ಏರಿಕೆ: ಇಲ್ಲಿ ಈಗ ಒಟ್ಟು 1 ಕೋಟಿ 48 ಲಕ್ಷದ 50 ಸಾವಿರ ರೂಪಾಯಿ ಸಮುದಾಯ ಬಂಡವಾಳ ನಿಧಿ ಇದೆ. ಕೆಲವರು ಕೌದಿ ಹೊಲೆಯುವ, ಕಿರಾಣಿ ಅಂಗಡಿ, ಹಿಟ್ಟಿನ ಗಿರಣಿ. ಉಡುಪು ತಯಾರಿಕೆ ಹಾಗೂ ಮಾರಾಟ, ಕೃಷಿಯಲ್ಲಿ ನರ್ಸರಿ, ತರಕಾರಿ ಮಾರಾಟ ಹೀಗೆ ಹಲವಾರು ವ್ಯಾಪಾರ ವಹಿವಾಟನ್ನು ಸ್ವ-ಸಹಾಯ ಗುಂಪುಗಳಿಂದ ಸಾಲ ಪಡೆದು ನಿತ್ಯ ದುಡಿಮೆ ಮಾಡುತ್ತಿದ್ದಾರೆ.
ಬಸಮ್ಮ ಎಂಬ ಮಹಿಳೆಯು ಸಣ್ಣದಾಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದವರು ಈಗ 10 ಲಕ್ಷ ರೂಪಾಯಿಯವರೆಗೂ ವಹಿವಾಟು ನಡೆಸುವಂತೆ ಅವರ ಅಂಗಡಿ ವ್ಯಾಪಾರ ನಡೆಯುತ್ತಿದೆ. ದುಡಿಮೆಗೆ ಬೇಕಾಗುವ ಮೂಲ ಬಂಡವಾಳವನ್ನು ಸ್ವಸಹಾಯ ಗುಂಪುಗಳಿಂದ ಪಡೆದು ಸರಳ ಕಂತುಗಳ ಮೂಲಕ ಸಾಲ ಮರುಪಾವತಿ ಮಾಡುತ್ತಿರುವ ಮಹಿಳೆಯರು ಈಗ ಸಂಪೂರ್ಣವಾಗಿ ಸ್ವಾವಲಂಬಿಗಳಾಗಿದ್ದಾರೆ.
ಇಡೀ ಗ್ರಾಮದಲ್ಲಿ ಪ್ರತಿ ಮನೆಯಲ್ಲಿ ಒಬ್ಬೊಬ್ಬರು ಸ್ವ-ಸಹಾಯ ಗುಂಪಿನ ಸದಸ್ಯರಾಗಿ ಸ್ವಾವಲಂಬಿಯಾಗಿ ಕುಟುಂಬದ ಆರ್ಥಿಕತೆ ಹೆಚ್ಚಿಸಲು ಸಹಕಾರಿಯಾಗಿದ್ದಾರೆ. ಈ ಒಕ್ಕೂಟದಿಂದ ಸಾಕಷ್ಟು ಸಮಾಜಿಕ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ತಮ್ಮ ಸದಸ್ಯರ ನೆರವಿಗೆ ಸ್ವಸಹಾಯ ಸಂಘ ಬಂದಿದೆ. ಮಹಿಳೆ ಆರ್ಥಿಕವಾಗಿ ಗಟ್ಟಿಯಾಗಿದ್ದರೆ ಎಂತಹ ಸಂಕಷ್ಟ ಸಮಯದಲ್ಲಿಯೂ ಕುಟುಂಬ ನಿರ್ವಹಣೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಇಂಥ ಒಕ್ಕೂಟಕ್ಕೆ ಕೇಂದ್ರ ಗ್ರಾಮೀಣಾಭಿವೃದ್ದಿ ಸಚಿವಾಲಯವು ಆತ್ಮನಿರ್ಭರ ಯೋಜನೆಯಲ್ಲಿ ಕೆಲಸ ಮಾಡುವ ಸ್ವಸಹಾಯ ಒಕ್ಕೂಟವನ್ನು ಗುರುತಿಸಿ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಇದನ್ನೂ ಓದಿ: ಬಂಜೆತನ ನಿವಾರಣೆಗೆ ನಾಟಿತಜ್ಞೆಯ ಟ್ರೀಟ್ಮೆಂಟ್.. ಮಕ್ಕಳಾಗದವರಿಗೆ ಮಕ್ಕಳ ಭಾಗ್ಯಕಲ್ಪಿಸುವ ಲಕ್ಷ್ಮಮ್ಮ