ಗಂಗಾವತಿ: ಮಹಿಳಾ ಸುರಕ್ಷತೆಯ ಬಗ್ಗೆ ಸರ್ಕಾರ ಮಾತ್ರವಲ್ಲ, ಸಮುದಾಯದ ಸಹಕಾರವೂ ಬೇಕು ಎಂಬ ನಿಟ್ಟಿನಲ್ಲಿ ಇದೀಗ ತಾಲೂಕಿನ ಕ್ರಿಯಾಶೀಲ ಯುವಕರ ತಂಡವೊಂದು 'ಒಂಟಿ ಮಹಿಳೆ'ಯರಿಗೆ ಸುರಕ್ಷತೆ ಮತ್ತು ಭದ್ರತೆ ಒದಗಿಸುವ ನಿಟ್ಟಿನಲ್ಲಿ ವಾಟ್ಸ್ಆ್ಯಪ್ ಗ್ರೂಪ್ವೊಂದನ್ನು ರಚಿಸಿಕೊಂಡಿದ್ದಾರೆ.
ಅಪಘಾತ, ಶಸ್ತ್ರಚಿಕಿತ್ಸೆ, ಹೆರಿಗೆಯಂತ ತುರ್ತು ಸಂದರ್ಭದಲ್ಲಿ ರೋಗಿಗಳಿಗೆ ನೆರವು ನೀಡುವ ಉದ್ದೇಶಕ್ಕೆ ಈಗಾಗಲೇ ರಕ್ತದಾನಿಗಳ ಮೊಬೈಲ್ ಸಂಖ್ಯೆ, ರಕ್ತದ ಗುಂಪು ಸಹಿತ ಒಂದು ವಾಟ್ಸ್ಆ್ಯಪ್ ಗ್ರೂಪ್ ರಚಿಸಿ ನೆರವು ನಿಡುತ್ತಿರುವ ಯುವಕರು, ಇದೀಗ ಒಂಟಿ ಮಹಿಳೆಯರ ನೆರವಿಗಾಗಿ ಧಾವಿಸಿದ್ದಾರೆ.
ಪ್ರಭುರಾಜ್, ಅಂಬಿ ನಾಯಕ್ ಕರಾಟೆ ಹಾಗೂ ಢಣಾಪುರದ ಹನುಮೇಶ ಭಾವಿಕಟ್ಟಿ ಎಂಬ ಯುವಕರು ಅಡ್ಮಿನ್ ಆಗಿರುವ 'ಶ್ರೀರಾಮ ರಕ್ಷೆ' ಎಂಬ ಹೆಸರಿನ್ಲಲಿ ಈ ಗ್ರೂಪ್ ಅನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ಪರಸ್ಪರ ಮಾಹಿತಿ ಹಂಚಿಕೊಂಡು ಮಹಿಳೆಯರಿಗೆ ನೆರವಾಗುವುದು ಈ ಗ್ರೂಪಿನ ಉದ್ದೇಶ ಎಂದು ಯುವಕರು ಹೇಳುತ್ತಾರೆ.
ಒಬ್ಬಂಟಿ ಮಹಿಳೆಯರು ತಾವು ಅಪಾಯದಲ್ಲಿದ್ದೇವೆ ಎಂಬ ಮಾಹಿತಿ ನೀಡಿದರೆ ಅಥವಾ ಎಲ್ಲಿಗಾದರೂ ಪಯಣ ಬೆಳೆಸಬೇಕಾಗಿದೆ ಎಂಬ ಮಾಹಿತಿ ಕೊಟ್ಟರೆ ಸಾಕು, ಆ ಮಹಿಳೆಯ ಸಮೀಪದಲ್ಲಿರುವ ಗ್ರೂಪಿನ ಸದಸ್ಯರು ಸ್ಥಳಕ್ಕೆ ತೆರಳಿ ಮಹಿಳೆಗೆ ರಕ್ಷಣೆ ನೀಡುತ್ತಾರೆ ಎಂದು ಯುವಕ ಹನುಮೇಶ ಭಾವಿಕಟ್ಟಿ ಹೇಳಿದ್ದಾರೆ.