ಕೊಪ್ಪಳ: ಕೋಮುವಾದಿ ಶಕ್ತಿಯನ್ನು ನಿಗ್ರಹಿಸಲು ನಾವು ಮೈತ್ರಿಯಾಗಿದ್ದೇವೆ ಎಂದು ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.
ನಗರದ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಮೈತ್ರಿ ಅಭ್ಯರ್ಥಿಯಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕೆ. ರಾಜಶೇಖರ ಹಿಟ್ನಾಳ್ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಏಪ್ರಿಲ್ 4ರಂದು ರಾಜ್ಯ ನಾಯಕರ ಜೊತೆಗೂಡಿ ಮತ್ತೊಮ್ಮೆ ನಾಮಪತ್ರ ಸಲ್ಲಿಸುತ್ತಾರೆ. ನಮ್ಮ ಜೆಡಿಎಸ್ ಪಕ್ಷದ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರವಾಗಿ ಮತಯಾಚನೆ ಮಾಡಲು ಸಭೆ ಕರೆಯಲಾಗಿದೆ. ಸ್ಥಳೀಯವಾಗಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಸರಿಪಡಿಸಿಕೊಂಡು ಮೈತ್ರಿ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡುತ್ತೇವೆ ಎಂದರು.
ಕೋಮುಶಕ್ತಿ ಬಿಜೆಪಿಯನ್ನು ನಿಗ್ರಹ ಮಾಡುವ ನಿಟ್ಟಿನಲ್ಲಿ ನಾವು ಒಂದಾಗಿದ್ದೇವೆ. ಸಿಎಂ ಕುಮಾರಸ್ವಾಮಿ ಅವರು ಎಲ್ಲ ಕಡೆಯೂ ಪ್ರಚಾರಕ್ಕೆ ಬರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು ಐಟಿ ದಾಳಿಗೆ ನಮ್ಮ ವಿರೋಧವಿಲ್ಲ. ಆದರೆ, ಚುನಾವಣೆ ಸಂದರ್ಭದಲ್ಲಿ ಐಟಿ ದಾಳಿ ಮಾಡಿರೋದಕ್ಕೆ ವಿರೋಧವಿದೆ. ರಾಜಕೀಯ ಕಾರಣಕ್ಕೆ ಐಟಿ ದಾಳಿ ಮಾಡಿಸಲಾಗಿದೆ. ಐಟಿ ದಾಳಿಯನ್ನು ಬಹಿರಂಗಪಡಿಸಿದ್ದು ಬಿಜೆಪಿಯವರೇ. ನಮ್ಮನ್ನು ಹೆದರಿಸೋಕೆ ಐಟಿ ದಾಳಿ ಮಾಡಿದರು. ನಾವು ಅದಕ್ಕೆ ಹೆದರುವುದಿಲ್ಲ ಎಂದರು.
ಈಶ್ವರಪ್ಪ ಅಯೋಗ್ಯ ಎಂದು ಹೇಳಿಕೆ ನೀಡೋದ್ರಿಂದ ಯಾರೂ ಅಯೋಗ್ಯ ಆಗೋದಿಲ್ಲ. ಸಿದ್ದರಾಮಯ್ಯ ಈಶ್ವರಪ್ಪ ಜೊತೆಗೆ ಎಂದೂ ಮಾತಾಡಿಲ್ಲ, ಮಾತಾಡೋದೂ ಇಲ್ಲ. ಸಿಎಂ ಕುಮಾರಸ್ವಾಮಿ ಅವರು ಯಾವ ಜಿಲ್ಲೆಗೂ ತಾರತಮ್ಯ ಮಾಡಿಲ್ಲ. ಜಿಲ್ಲೆಗೆ ಏನು ಅವಶ್ಯಕತೆ ಇದೆಯೋ ಅದಕ್ಕನುಗುಣವಾಗಿ ನೀಡಿದ್ದಾರೆ ಎಂದರು. ನಿಯೋಜಿತ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ್, ಶಾಸಕರಾದ ಅಮರೇಗೌಡ ಪಾಟೀಲ್ ಭಯ್ಯಾಪುರ, ಕೆ. ರಾಘವೇಂದ್ರ ಹಿಟ್ನಾಳ್, ಜೆಡಿಎಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ್, ಕಾರ್ಯಾಧ್ಯಕ್ಷ ವೀರೇಶ ಮಹಾಂತಯ್ಯನಮಠ, ಕಾಂಗ್ರೆಸ್ ಮುಖಂಡ ಚಂದ್ರಶೇಖರ ಭಟ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.