ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾದ ಅಂಜನಾದ್ರಿ ಬೆಟ್ಟ ಹಾಗು ದೇಗುಲದಲ್ಲಿ ಕಂದಾಯ ಅಧಿಕಾರಿಗಳ ಅಕ್ರಮ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಎಗ್ಗಿಲ್ಲದೇ ನಡೆದಿದೆ. ಇದರ ವಿರುದ್ಧ ಕೋರ್ಟ್ ಮೆಟ್ಟಿಲೇರುವುದಾಗಿ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ತಹಶೀಲ್ದಾರ್ ಮತ್ತು ಕಂದಾಯ ನಿರೀಕ್ಷಕ ಸೇರಿ ಹಲವು ಅಕ್ರಮಗಳನ್ನು ಮಾಡುತ್ತಿದ್ದಾರೆ. ಬೆಟ್ಟದ ಕೆಳಗೆ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ಅಕ್ರಮವಾಗಿ ವಸೂಲಿ ಮಾಡಲಾಗುತ್ತಿದೆ. ಕಂದಾಯ ಅಧಿಕಾರಿ ತಮ್ಮ ಬಂಧುವೊಬ್ಬರಿಗೆ ಇದರ ಉಸ್ತುವಾರಿ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕೋರ್ಟ್ ತೀರ್ಪಿನ ಮೂಲಕ ಈಗಾಗಲೇ ದೇಗುಲದ ಅರ್ಚಕನಾಗಿ ನಾನು ಸೇವೆ ಸಲ್ಲಿಸುತ್ತಿದ್ದು, ಕಂದಾಯ ಇಲಾಖೆಯಿಂದ ಈ ಹಿಂದೆ ಒಬ್ಬ ಅರ್ಚಕನನ್ನು ನೇಮಕ ಮಾಡಲಾಗಿತ್ತು. ಆದರೆ, ಈಗ ಕಾನೂನು ಬಾಹಿರವಾಗಿ ಮತ್ತೆ ಕೆಲ ಅರ್ಚಕರನ್ನು ನಿಯೋಜಿಸುವ ಮೂಲಕ ಕಂದಾಯ ಇಲಾಖೆ ಅಧಿಕಾರಿಗಳು ಹಣ ಕೊಳ್ಳೆ ಹೊಡೆಯಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಅಲ್ಲದೇ, ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆಂದು ತಯಾರಿಸಲಾಗುತ್ತಿರುವ ಪ್ರಸಾದಕ್ಕಾಗಿ ಖರೀದಿಸಲಾಗುತ್ತಿರುವ ಆಹಾರ ಸಾಮಗ್ರಿಗಳಲ್ಲಿಯೂ ದುಪ್ಪಟ್ಟು ಹಣ ನಮೂದಿಸಿ ಹಣ ದುರುಪಯೋಗ ಮಾಡಲಾಗುತ್ತಿದೆ. ಇದರ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆದರೆ, ಸಂಬಂಧಿತ ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಯಾವುದೇ ಕ್ರಮಕ್ಕೆ ಮುಂದಾಗಿರುವುದರಿಂದ ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿ ಹೋರಾಟಕ್ಕೆ ಅಣಿಯಾಗಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಓದಿ: ಸೈನಿಕ ಶಾಲೆ ಪ್ರವೇಶ ಪರೀಕ್ಷೆ: ಕೆಎಎಸ್ ಅಧಿಕಾರಿ ಪುತ್ರಿಗೆ ಪ್ರತ್ಯೇಕ ಕೊಠಡಿ ನೀಡಿದ ಆರೋಪ!