ಕೊಪ್ಪಳ: ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಲಸಿಕೆ ಅಸ್ತ್ರ. ಹೀಗಾಗಿ, ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹಿಂದೆಮುಂದೆ ನೋಡಿದರು. ಕೆಲವೆಡೆ ಲಸಿಕೀಕರಣದ ಸಿಬ್ಬಂದಿ ಮೇಲೆ ಹಲ್ಲೆಯಾದ ಘಟನೆಯೂ ನಡೆದವು. ದಿನಗಳೆದಂತೆ ಜನರು ಲಸಿಕೆ ಹಾಕಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಹಲವು ಗ್ರಾಮಗಳು ಶೇ. ನೂರರಷ್ಟು ಲಸಿಕೀಕರಣ ಪೂರ್ತಿಗೊಳಿಸಿ ಮಾದರಿಯಾಗುತ್ತಿವೆ.
ಕಳೆದ 2020 ಮಾರ್ಚ್ ತಿಂಗಳಿನಲ್ಲಿ ಹರಡುವಿಕೆ ಆರಂಭಿಸಿದ ಕೊರೊನಾ ಸೋಂಕು, ಈಗಾಗಲೇ ರಾಜ್ಯದಲ್ಲಿ ಎರಡು ಅಲೆಗಳ ಮೂಲಕ ಜನರನ್ನು ಹೈರಾಣಾಗಿಸಿದೆ. ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಲಸಿಕೆ ಅಭಿವೃದ್ಧಿಯಾದ ಬಳಿಕ ಲಸಿಕೀಕರಣ ಭರದಿಂದ ನಡೆದಿದೆ.
ಕಳೆದ ಜನವರ 16ರಿಂದ ರಾಜ್ಯದಲ್ಲಿ ಲಸಿಕೆ ಹಾಕುವ ಕಾರ್ಯ ಪ್ರಾರಂಭಗೊಂಡು ಮೊದಲು ಮುಂಚೂಣಿ ಕಾರ್ಯಕರ್ತರಿಗೆ, 60 ವರ್ಷ ಮೇಲ್ಪಟ್ಟವರು, 45-60 ವರ್ಷ, ಈಗ 18 ವಯಸ್ಸು ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಹಾಕಲಾಗುತ್ತಿದೆ. ಅನೇಕ ಕಡೆ ಜನರು ಲಸಿಕೆ ಹಾಕಿಸಿಕೊಳ್ಳಲು ಇನ್ನೂ ಸಹ ಹಿಂಜರಿಯುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ 223 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಈವರೆಗೂ 8,11,723 ಜನರು ಲಸಿಕೆ ಪಡೆದಿದ್ದಾರೆ. ಆ ಪೈಕಿ 6,14,487 ಮೊದಲು ಡೋಸ್, 1,97,236 ಜನರು ಎರಡೂ ಡೋಸ್ ವ್ಯಾಕ್ಸಿನ್ ಪಡೆದಿದ್ದಾರೆ. ಈ ನಡುವೆ ಕೊಪ್ಪಳ ಜಿಲ್ಲೆಯ 8 ಗ್ರಾಮಗಳು ಈಗಾಗಲೇ ಶೇ.100 ಲಸಿಕೀಕರಣಗೊಂಡು ಮಾದರಿಯಾಗುತ್ತಿವೆ.
ಜಿಲ್ಲೆಯ ಕಾತರಕಿ-ಗುಡ್ಲಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾತರಕಿ, ಗುಡ್ಲಾನೂರು, ಹಾದರಮಗ್ಗಿ, ಬೇಳೂರು, ಡಂಬರಳ್ಳಿ, ತಿಗರಿ ಗ್ರಾಮ ಪಂಚಾಯಿತಿಯ ತಿಗರಿ, ಮತ್ತೂರು, ಕುಕನೂರು ತಾಲೂಕಿನ ಭಾನಾಪುರ, ಅಡವಿಹಳ್ಳಿ ಹಾಗೂ ತಳಬಾಳ ಗ್ರಾಮಗಳಲ್ಲಿ ಶೇಕಡಾ 100 ರಷ್ಟು ಜನರು ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕೃತ ಅಂಕಿ ಅಂಶಗಳು ದೃಢಪಡಿಸುತ್ತವೆ.
ಈ ಗ್ರಾಮಗಳು ಶೇ.100ರಷ್ಟು ಲಸಿಕಾಕರಣ ಸಾಧಿಸಲು ಅಲ್ಲಿ ಜನರ ಪಾಲ್ಗೊಳ್ಳುವಿಕೆ ಕಾರಣವಾಗಿದೆ. ಸ್ಥಳೀಯ ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆಯ ಮುತುವರ್ಜಿಯಿಂದ ಜನರಲ್ಲಿ ಜಾಗೃತಿ ಮೂಡಿಸಿದ ಪರಿಣಾಮ ಜನರು ಸ್ವಯಂಪ್ರೇರಿತರಾಗಿ ವ್ಯಾಕ್ಸಿನ್ ಹಾಕಿಸಿಕೊಂಡು ಕೊರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸಾಥ್ ನೀಡಿದ್ದಾರೆ.
ಇದನ್ನೂ ಓದಿ: ಜಾಬ್ ಮೇಳದಲ್ಲಿ ಆಯ್ಕೆಯಾದ 351 ಅಭ್ಯರ್ಥಿಗಳಿಗೆ ನೇಮಕ ಪತ್ರ ನೀಡಲಾಗಿದೆ : ಸಚಿವ ಅಶ್ವತ್ಥ್ ನಾರಾಯಣ