ಗಂಗಾವತಿ:ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಮಾತ್ರ ಸೀಮಿತವಾದ ನಗರದ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗೆ ಹೆಚ್ಚುವರಿಯಾಗಿ 27 ಕಿ.ಮೀ ದೂರದ ಕನಕಗಿರಿ ಪೊಲೀಸ್ ಠಾಣೆಯ ಉಸ್ತುವಾರಿ ನೀಡಲಾಗಿದೆ.
ಇಲ್ಲಿವರೆಗೂ ಗ್ರಾಮೀಣ ವೃತ್ತದ ಸಿಪಿಐ ವ್ಯಾಪ್ತಿಗೆ ಬರುತ್ತಿದ್ದ ಕಾರಟಗಿ, ಕನಕಗಿರಿ ಮತ್ತು ಗಂಗಾವತಿ ಗ್ರಾಮೀಣ ಠಾಣೆಗಳನ್ನು ಸಂಪೂರ್ಣವಾಗಿ ಪ್ರತ್ಯೇಕಿಸಲಾಗಿದೆ. ಕಾರಟಗಿ ಹಾಗೂ ಗಂಗಾವತಿ ಗ್ರಾಮೀಣ ಠಾಣೆಗೆ ಪ್ರತ್ಯೇಕ ಪಿಐಗಳನ್ನು ನಿಯೋಜಿಸಿ ಗ್ರಾಮೀಣ ವೃತ್ತದಿಂದ ಮುಕ್ತಗೊಳಿಸಲಾಗಿದೆ. ಅಗತ್ಯವಿದ್ದಲ್ಲಿ ಗಂಗಾವತಿ ಗ್ರಾಮಾಂತರ ವೃತ್ತವನ್ನು ಕನಕಗಿರಿ ವೃತ್ತ ಎಂದು ಮರು ನಾಮಕರಣ ಮಾಡಿಕೊಳ್ಳುವಂತೆ ಇಲಾಖೆ ಹೊರಡಿಸಿರುವ ಆದೇಶದಲ್ಲಿ ಸಲಹೆ ನೀಡಲಾಗಿದೆ.
ಕನಕಗಿರಿ ಠಾಣೆಯ ಉಸ್ತುವಾರಿಯನ್ನು ಗಂಗಾವತಿ ಸಂಚಾರಿ ಠಾಣೆಗೆ ವಹಿಸಿರುವುದು ಆಡಳಿತಾತ್ಮಕವಾಗಿ ಅವೈಜ್ಞಾನಿಕವಾಗಿದೆ. ಅಗತ್ಯವಿದ್ದಲ್ಲಿ ಕನಕಗಿರಿ ಠಾಣೆಗೆ ಭೇಟಿ ನೀಡಲು ಸಂಚಾರಿ ಠಾಣೆಯ ಪಿಐ 27 ಕಿ.ಮೀ ದೂರ ಸಂಚರಿಸಬೇಕಿದೆ. ಇದರ ಬದಲು ಪಕ್ಕದ ಕಾರಟಗಿ ಠಾಣೆಯ ಪಿಐಗೆ ಈ ಉಸ್ತುವಾರಿ ವಹಿಸಿದ್ದರೆ ಅನುಕೂಲವಾಗಿರುತ್ತಿತ್ತು ಎನ್ನಲಾಗುತ್ತಿದೆ.